ಸೌದಿ: ನಮಾಜ್ ವೇಳೆ ಅಂಗಡಿಗಳನ್ನು ಮುಚ್ಚಿಡುವ ಬಗ್ಗೆ ವ್ಯಾಪಕ ಚರ್ಚೆ

ರಿಯಾದ್: ನಮಾಝಿನ ಸಮಯದಲ್ಲಿ ಅಂಗಡಿ ಮತ್ತು ವ್ಯವಹಾರ ಕೇಂದ್ರಗಳನ್ನು ಮುಚ್ಚಿಡುವ ಸಂಪ್ರದಾಯವನ್ನು ಕೊನೆಗೊಳಿಸುವಂತೆ ಸೌದಿ ಅರೇಬಿಯಾದಲ್ಲಿ ವ್ಯಾಪಕ ಚರ್ಚೆ. ಪ್ರತೀ ಪ್ರಾರ್ಥನೆ ಸಮಯಗಳಲ್ಲಿ ವ್ಯಾಪಾರ ಸಂಸ್ಥೆಗಳನ್ನು ಮುಚ್ಚಿಡಲು ಕಾನೂನು ಅಥವಾ ಧರ್ಮದಲ್ಲಿ ಯಾವುದೇ ಆಧಾರಗಳಿಲ್ಲ ಎಂದು ಸೌದಿ ಶುರಾ ಕೌನ್ಸಿಲ್ ಸದಸ್ಯ ಮತ್ತು ಇಸ್ಲಾಮಿಕ್ ವಿದ್ವಾಂಸ ಮತ್ತು ನ್ಯಾಯಾಧೀಶ ಡಾ.ಇಸ್ಸಾ ಅಲ್-ಘೈತ್ ಅವರು ಲೇಖನ ಬರೆದ ನಂತರ ಈ ವಿದ್ಯಮಾನ ಕಂಡು ಬಂದಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಈ ಹಿಂದೆ, ಗ್ರಾಹಕರ ಅನುಕೂಲಕ್ಕಾಗಿ, ಅಂಗಡಿಗಳಲ್ಲಿ ವ್ಯಾಪಾರವನ್ನು ಹೆಚ್ಚಿಸಲು ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರು. ಪ್ರಾರ್ಥನೆಯ ಸಮಯದಲ್ಲಿಯೂ ಅಂಗಡಿಗಳನ್ನು ತೆರೆಯಲು ಈ ಅನುಮತಿ ಅನ್ವಯಿಸುವುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಅಧಿಕಾರಿಗಳು ಅದನ್ನು ತಿರಸ್ಕರಿಸಿ, ಪ್ರಾರ್ಥನೆಯ ಸಮಯದಲ್ಲಿ ಅಂಗಡಿಗಳನ್ನು ಮುಚ್ಚಬೇಕು ಎಂದು ವಿವರಣೆ ನೀಡಿದ್ದರು.

ಪ್ರಾರ್ಥನೆಯ ಸಮಯ ಪ್ರಾರಂಭವಾದಾಗಲೇ ಅಂಗಡಿಗಳನ್ನು ಮುಚ್ಚಲು ಮತ್ತು ನಮಾಜಿಗೆ ತೆರಳಲು ಒತ್ತಾಯಿಸಲು ಶರಿಯತ್ ಅಥವಾ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ ಎಂದು ಇಸ್ಸಾ ಅಲ್-ಗೈಥ್ ಲೇಖನದಲ್ಲಿ ಹೇಳುತ್ತಾರೆ.

ಈ ಹಿಂದೆ ಶುಕ್ರವಾರದ ಜುಮಾ ಪ್ರಾರ್ಥನೆಗಾಗಿ ಮಾತ್ರ ಕಡ್ಡಾಯವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ತಿಳಿಸಲಾಗಿತ್ತು. ಆದರೆ ಇದನ್ನು ಎಲ್ಲಾ ನಮಾಜ್ಗಳ ಮೇಲೆ ಹೇರಲಾಗಿದೆ ಎಂದು ಮಕ್ಕಾದಲ್ಲಿನ ಧಾರ್ಮಿಕ ಪೊಲೀಸರ ಮುಖ್ಯಸ್ಥ ಶೈಖತ ಅಹ್ಮದ್ ಅಲ್-ಗಾಮಿದಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!