janadhvani

Kannada Online News Paper

ಬಾಂಬ್: ಪೊಲೀಸರ ಮೇಲೆ ಅನುಮಾನವಿದೆ, ಶೀಘ್ರ ತನಿಕೆ ನಡೆಯಲಿ- ಕುಮಾರಸ್ವಾಮಿ

ಚಿಕ್ಕಮಗಳೂರು,ಜ.20: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾಗಿರುವ ಪ್ರಕರಣದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಪೊಲೀಸರು ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಿ ನಿಜವಾದ ಅಪರಾಧಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಕೆಲ ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ತನಿಖೆ ವಿಳಂಬ ಮಾಡಿ 15 ದಿನ ಸಮಯ ತೆಗೆದುಕೊಂಡು ಬೇರೆ ಕಥೆ ಸೃಷ್ಟಿ ಮಾಡಿಬಿಡುವ ಸಾಧ್ಯತೆ ಇದೆ ಎಂದು ಆತಂಕಪಟ್ಟಿದ್ದಾರೆ. ಶೃಂಗೇರಿಯಲ್ಲಿ ದೇವೇಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಸಹಸ್ರ ಚಂಡಿಕಾ ಯಾಗದಲ್ಲಿ ಪಾಲ್ಗೊಂಡಿರುವ ಕುಮಾರಸ್ವಾಮಿ ಅವರು ಬಿಡುವಿನ ವೇಳೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮೇಲಿನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ಧಾರೆ.

ಮಂಗಳೂರಿನಲ್ಲಿ ಬಾಂಬ್ ಇಟ್ಟವರು ಯಾರು ಎಂದು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಆ ಜಾಗದಲ್ಲಿ ಸಿಸಿಟಿವಿ ಇರುತ್ತದೆ. ದುಷ್ಕರ್ಮಿಗಳನ್ನು ಪತ್ತೆ ಹೆಚ್ಚಲು ಪೊಲೀಸರು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. 15 ದಿನ ಸಮಯ ತೆಗೆದುಕೊಂಡು ಬೇರೆ ಕಥೆ ಸೃಷ್ಟಿಸಬಾರದು. ವಾಸ್ತವಾಂಶವನ್ನು ಜನರ ಮುಂದಿಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಪೊಲೀಸರನ್ನು ಆಗ್ರಹಿಸಿದ್ಧಾರೆ.

ನನಗೆ ಕೆಲ ಪೊಲೀಸರ ಮೇಲೆ ಅನುಮಾನ ಇದೆ. ಸರ್ಕಾರ ಮತ್ತು ಪೊಲೀಸರು ಸಮಾಜ ಒಡೆಯುವ ಕೆಲಸ ಮಾಡಬಾರದು. ಸಮಾಜದಲ್ಲಿ ಅಪನಂಬಿಕೆ ಉಂಟಾಗಬಾರದು. ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಹಲವು ಸಮಸ್ಯೆಗಳಿವೆ. ನಿಮ್ಮಲ್ಲಿ ಅಧಿಕಾರ ಇದೆ. ತನಿಖೆ ಯಾವುದರಿಂದಲಾದರೂ ಮಾಡಿಕೊಳ್ಳಿ. ಆದರೆ ಜನರ ವಿಶ್ವಾಸ, ನಂಬಿಕೆ ಕಳೆಯುವ ಕೆಲಸ ಮಾಡಬೇಡಿ. ಪೊಲೀಸರು ಸಂಶಯದ ಹೇಳಿಕೆ ನೀಡಬೇಡಿ ಎಂದು ಕುಮಾರಸ್ವಾಮಿ ತಿಳಿಸಿದ್ಧಾರೆ.

ಸರ್ಕಾರವೇ ಜನತೆಯಲ್ಲಿ ಸಂಘರ್ಷದ ಮನೋಭಾವವನ್ನು ಉಂಟು ಮಾಡುತ್ತಿದೆ. ಇದಕ್ಕಾಗಿ ಕೆಲವು ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿದೆ. ಆ ರೀತಿಯ ಅನುಮಾನಗಳು ನನ್ನಲ್ಲಿ ಸೃಷ್ಟಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಶಂಕಿಸಿದ್ಧಾರೆ.

error: Content is protected !! Not allowed copy content from janadhvani.com