ಆಧಾರ್ ಕಾರ್ಡ್ ಹೊಂದಿರುವವರಿಗಾಗಿ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಐಒಎಸ್ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಿಗಾಗಿ ತನ್ನ ಎಂಆಧಾರ್ ಆ್ಯಪ್‌ನ ನೂತನ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಅಥವಾ ಐಫೋನ್‌ಗಳಿಗಾಗಿ ಆ್ಯಪ್ ಸ್ಟೋರ್‌ನಿಂದ ಇದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.
ಎಂಆಧಾರ್ ಆ್ಯಪ್‌ಗೆ ಆ್ಯಂಡ್ರಾಯ್ಡ್ 5.0 ಮತ್ತು ಮೇಲಿನ ಮಾದರಿ ಹಾಗೂ ಐಒಎಸ್ 10.0 ಮತ್ತು ನಂತರದ ಫೋನ್‌ಗಳು ಇರಬೇಕಾಗುತ್ತದೆ. ಎಂಆಧಾರ್ ಆ್ಯಪ್ ಅನ್ನು ಐಫೋನ್,ಐಪಾಡ್ ಮತ್ತು ಐಪೊಡ್ ಟಚ್‌ನಲ್ಲಿ ಬಳಸಬಹುದು. ಆಧಾರ್ ಕಾರ್ಡ್ ಆ್ಯಪ್ ಬಳಕೆದಾರರು ಹಳೆಯ ಆ್ಯಪ್‌ನ್ನು ಡಿಲೀಟ್ ಮಾಡಿ ಹೊಸ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಯುಐಡಿಎಐ ಸೂಚಿಸಿದೆ. ಎಂಆಧಾರ್ ಆ್ಯಪ್ ನೀವು ಸಾಫ್ಟ್ ಕಾಪಿಯ ರೂಪದಲ್ಲಿ ಆಧಾರ್ ಕಾರ್ಡ್ ಮಾಹಿತಿಯನ್ನು ನಿಮ್ಮೊಂದಿಗೆ ಒಯ್ಯಲು ಅವಕಾಶವನ್ನು ಕಲ್ಪಿಸುತ್ತದೆ. ನೂತನ ಆ್ಯಪ್‌ನ ಪ್ರಮುಖ ವೈಶಿಷ್ಟಗಳಿಲ್ಲಿವೆ….
- ಎಂಆಧಾರ್ ಆ್ಯಪ್ ಬಹುಭಾಷಿಕ: ಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ, ಪಂಜಾಬಿ, ಮರಾಠಿ, ಒಡಿಯಾ, ಅಸ್ಸಾಮೀಸ್ ಮತ್ತು ಬೆಂಗಾಳಿ ಹೀಗೆ 13 ಭಾಷೆಗಳು ಈ ಆ್ಯಪ್‌ನಲ್ಲಿ ಉಪಲಬ್ಧವಿವೆ. ಪ್ರಾದೇಶಿಕ ಭಾಷೆಗಳಲ್ಲಿ ಟೈಪ್ ಮಾಡುವ ಸವಾಲುಗಳನ್ನು ನಿವಾರಿಸಲು ಫಾರ್ಮ್‌ಗಳಲ್ಲಿಯ ಇನ್‌ಪುಟ್ ಫೀಲ್ಡ್‌ಗಳು ಇಂಗ್ಲಿಷ್‌ನಲ್ಲಿ ನಮೂದಿಸಿದ ಮಾಹಿತಿಯನ್ನು ಮಾತ್ರ ಸ್ವೀಕರಿಸುತ್ತವೆ ಎನ್ನುವುದನ್ನು ಬಳಕೆದಾರರು ಗಮನದಲ್ಲಿಟ್ಟುಕೊಳ್ಳಬೇಕು.
- ವ್ಯಕ್ತಿಗತ ಆಧಾರ್ ಸೇವೆಗಳನ್ನು ಪಡೆದುಕೊಳ್ಳಲು ಬಳಕೆದಾರರು ತಮ್ಮ ಆಧಾರ್ ಪ್ರೊಫೈಲ್‌ನ್ನು ಎಂಆಧಾರ್ ಆ್ಯಪ್‌ನಲ್ಲಿ ನೋಂದಾಯಿಸಬೇಕಾಗುತ್ತದೆ. ಆದರೆ ಆಧಾರ ಹೊಂದಿರುವ/ಹೊಂದಿಲ್ಲದ ನಿವಾಸಿ ಭಾರತೀಯರು ಈ ಆ್ಯಪ್‌ನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು.
- ಬಳಕೆದಾರರು ಎಂಆಧಾರ್ ಆ್ಯಪ್‌ನಲ್ಲಿಯ ಹಲವಾರು ಸೇವೆಗಳನ್ನು ಪಡೆದುಕೊಳ್ಳಬಹುದು. ಇಲ್ಲಿ ಮೇನ್ ಸರ್ವಿಸ್ ಡ್ಯಾಷ್‌ಬೋರ್ಡ್,ರಿಕ್ವೆಸ್ಟ್ ಸ್ಟೇಟಸ್ ಸರ್ವಿಸಸ್ ಮತ್ತು ಮೈ ಆಧಾರ್‌ನಂತಹ ಸೇವೆಗಳು ಲಭ್ಯವಿವೆ.
- ಎಂಆಧಾರ್ ಆ್ಯಪ್ ಬಳಕೆದಾರರು ಆಧಾರ್ ಕಾರ್ಡ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು, ಮರುಮುದ್ರಣಕ್ಕೆ ಬೇಡಿಕೆ ಸಲ್ಲಿಸಬಹುದು,ವಿಳಾಸವನ್ನು ಪರಿಷ್ಕರಿಸಬಹುದು, ಆಫ್‌ಲೈನ್ ಇಕೆವೈಸಿಯನ್ನು ಡೌನ್‌ಲೋಡ್ ಮಾಡಬಹುದು, ಕ್ಯೂಆರ್ ಕೋಡ್‌ನ್ನು ತೋರಿಸಬಹುದು ಅಥವಾ ಸ್ಕಾನ್ ಮಾಡಬಹುದು,ಆಧಾರ್ ಮತ್ತು ಮೇಲ್/ಇಮೇಲ್‌ನ್ನು ದೃಢೀಕರಿಸಬಹುದು, ಯುಐಡಿ/ಇಐಡಿನ್ನು ಹಿಂಪಡೆಯಬಹುದು,ಆಧಾರ್ ಧೃಢೀಕರಣ ಪತ್ರವನ್ನು ಕೋರಬಹುದು. ಬಳಕೆದಾರರು ವಿವಿಧ ಆನ್‌ಲೈನ್ ಮನವಿಗಳ ಸ್ಥಿತಿಗತಿಯನ್ನೂ ಪರಿಶೀಲಿಸಬಹುದು.
- ಎಂಆಧಾರ್ ಆ್ಯಪ್ ನ ಮೂಲಕ ಬಳಕೆದಾರರು ತಮ್ಮ ಆಧಾರ್ ಅಥವಾ ಬಯೊಮೆಟ್ರಿಕ್ ಅಥೆಂಟಿಕೇಷನ್ ಅನ್ನು ಲಾಕ್ ಅಥವಾ ಅನ್‌ಲಾಕ್ ಮಾಡಬಹುದು.
- ಎಂಆಧಾರ್ ಆ್ಯಪ್‌ನಲ್ಲಿಯ ‘ಮೈ ಆಧಾರ್’ ವಿಭಾಗವು ವ್ಯಕ್ತಿಗತವಾಗಿದ್ದು ಇಲ್ಲಿ ಆಧಾರ್ ಸೇವೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್‌ದಾರರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಿಲ್ಲ.
- ಮಲ್ಟಿ-ಪ್ರೊಫೈಲ್ ಸೇವೆಯು ಎಂಆಧಾರ್ ಆ್ಯಪ್‌ನಲ್ಲಿ ಲಭ್ಯವಿದೆ. ಆಧಾರ್ ಕಾರ್ಡ್‌ದಾರರು ಒಂದೇ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ತಮ್ಮ ಪ್ರೊಫೈಲ್ ವಿಭಾಗದಲ್ಲಿ ಮೂರರವರೆಗೆ ಪ್ರೊಫೈಲ್‌ಗಳನ್ನು ಸೇರ್ಪಡೆಗೊಳಿಸಬಹುದು.
- ಈ ಆ್ಯಪ್‌ನ ಮೂಲಕ ಬಳಕೆದಾರರು ಸಮೀಪದ ಆಧಾರ ನೋಂದಣಿ ಕೇಂದ್ರವನ್ನು ಕಂಡುಕೊಳ್ಳಬಹುದು. ನೆಟ್‌ವರ್ಕ್ ಇಲ್ಲದಿದ್ದಾಗಲೂ ಸಂಬಂಧಿತ ಸೇವೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್‌ದಾರರು ‘ಎಸ್‌ಎಂಎಸ್ ಮೂಲಕ ಆಧಾರ್ ಸೇವೆ ’ಗಳನ್ನು ತಲುಪಬಹುದು.
- ಎಂಆಧಾರ್ ಆ್ಯಪ್ ಆಫ್‌ಲೈನ್‌ನಲ್ಲಿ ಕೆಲಸ ಮಾಡುವುದಿಲ್ಲ ಎನ್ನುವುದು ಬಳಕೆದಾರರಿಗೆ ಗೊತ್ತಿರಲಿ. ಯುಐಡಿಎಐನಿಂದ ಡಾಟಾವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅಂತರ್ಜಾಲವು ಅಗತ್ಯವಾಗಿದೆ.
- ರೈಲುಗಳಲ್ಲಿ ಪ್ರಯಾಣಿಸುವವರಿಗೆ ಎಂಆಧಾರ್ ಆ್ಯಪ್ ಅತ್ಯಂತ ಉಪಯೋಗಿಯಾಗಿದೆ. ರೈಲುಗಳ ಯಾವುದೇ ಕಾಯ್ದಿರಿಸಿದ ಬೋಗಿಯಲ್ಲಿ ಪ್ರಯಾಣ ಬೆಳೆಸಲು ಗುರುತಿನ ಪುರಾವೆಯಾಗಿ ಇದನ್ನು ತೋರಿಸಬಹುದಾಗಿದೆ.