janadhvani

Kannada Online News Paper

‘ಮಹಾ’ ಹಗ್ಗಜಗ್ಗಾಟಕ್ಕೆ ತೆರೆ: ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚಿಸುವ ಸಾಧ್ಯತೆ

ಮುಂಬೈ: ಮಹಾರಾಷ್ಟ್ರ ಸರ್ಕಾರ ರಚನೆಯ ಹಗ್ಗಜಗ್ಗಾಟ ಅಂತಿಮ ಹಂತಕ್ಕೆ ತಲುಪಿದ್ದು ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಮೂರು ಪಕ್ಷಗಳು ಸೇರಿ ಶನಿವಾರ ಸರ್ಕಾರ ರಚಿಸುವ ಸಾಧ್ಯತೆ ಇದೆ.

ಮೂರು ಪಕ್ಷಗಳ ಶಾಸಕರ ಸಹಿವುಳ್ಳ ಪತ್ರವನ್ನು ಶನಿವಾರ ರಾಜ್ಯಪಾಲ ಭಗತ್ ಸಿಂಗ್ ಕೌಶರಿ ಅವರಿಗೆ ಹಸ್ತಾಂತರ ಮಾಡಲಾಗುವುದು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಮುಂಬೈನಲ್ಲಿ ಮೂರು ಪಕ್ಷಗಳ ಜಂಟಿ ಸಭೆ ನಡೆಯುತ್ತಿದ್ದು, ಮೈತ್ರಿಯನ್ನು ಅಂತಿಮಗೊಳಿಸಲಾಗಿದೆ. ಅಧಿಕಾರ ಹಂಚಿಕೆ ಸಂಬಂಧ ನಡೆಯುವ ಸಭೆಯಲ್ಲಿ ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ್ ಭಾಗಿಯಾಗಲಿದ್ದಾರೆ.

ಶನಿವಾರ ಮೂರು ಪಕ್ಷಗಳ ಶಾಸಕರ ಸಹಿವುಳ್ಳ ಪತ್ರವನ್ನು ರಾಜ್ಯಪಾಲರಿಗೆ ನೀಡಲು ತೀರ್ಮಾನಿಸಲಾಗಿದ್ದು, ಭಾನುವಾರ ಅಥವಾ ಸೋಮವಾರ ಮಹಾರಾಷ್ಟ್ರದಲ್ಲಿ ಸರ್ಕಾರ ಅಧಿಕಾರ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.

ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಬಳಿಕ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ಬಹುಶಃ ನಾಳೆ ಮುಂಬೈನಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಮೂರು ಪಕ್ಷಗಳ ನಡುವೆ ಮಹಾರಾಷ್ಟ್ರ ವಿಕಾಸ್ ಅಗಾಡಿ ಹೆಸರಿನಲ್ಲಿ ಮೈತ್ರಿಯಾಗುವ ಸಾಧ್ಯತೆ ಇದೆ. ಸಂವಿಧಾನದ ಸ್ಫೂರ್ತಿ ಮಾರ್ಗದರ್ಶನದಲ್ಲಿ ಸರ್ಕಾರ ನಡೆಯಲಿದೆ.

ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕರಾದ ಅಶೋಕ್ ಚವಾಣ್, ಪೃಥ್ವಿರಾಜ್ ಚವಾಣ್, ಬಾಳಾಸಾಹೇಬ್ ಥರೋಟ್, ವಿಜಯ್ ವಡೆತ್ತಿವಾರ್, ಕೆಸಿ.ಪಡ್ವಿ, ವಿಶ್ವವಿಜಿತ್ ಕದಂ, ಸತೇಜ್ ಬಂಟಿ ಪಾಟೀಲ್, ಸುನೀಲ್ ಕೇದಾರ್ ಮತ್ತು ಇತರರು ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ. ಎನ್​ಸಿಪಿಯಿಂದ ಜಯಂತ್ ಪಾಟೀಲ್, ನವಾಬ್ ಮಲ್ಲಿಕ್, ಹಸ್ನ್ ಮುಶ್ರೀಫ್, ಅನಿಲ್ ದೇಶ್ಮುಖ್, ಧನಂಜಯ್ ಮುಂಡೆ, ಚಗನ್ ಭುಜ್ಬಾಲ್, ಅಜಿತ್ ಪವಾರ್, ದಿಲೀಪ್ ವಾಸೆಲ್ ಪಾಟೀಲ್, ಮಾರ್ಕಡ್ ಪಾಟೀಲ್, ರಾಜೇಶ್ ತೋಪೆ ಮತ್ತು ಇತರರು ಸಂಪುಟ ಸೇರುವ ಸಾಧ್ಯತೆ ಇದೆ.