ನವದೆಹಲಿ,ನ.17: ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆ ‘ಏರ್ ಇಂಡಿಯಾ’ ಹಾಗೂ ತೈಲ ಸಂಸ್ಥೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಬಿಪಿಸಿಎಲ್)’ ಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮಾತುಕತೆಯನ್ನು ಅಂತಿಮಗೊಳಿಸಲು ಸರ್ಕಾರ ಸಂಕಲ್ಪಿಸಿದ್ದು, ಬರುವ ಮಾಚ್ ಒಳಗೆ ಈ ಪ್ರಕ್ರಿಯೆ ಮುಗಿಯಲಿದೆ ಎಂದು ಆರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ನಿನ್ನೆ ತಿಳಿಸಿದ್ದಾರೆ.
‘ಈ ವರ್ಷಾಂತ್ಯದೊಳಗೆ ಈ ಎರಡೂ ಸಂಸ್ಥೆಗಳ ಮಾರಾಟ ಪ್ರಕ್ರಿಯೆ ಮುಗಿಯುವುದೆಂಬ ನಿರೀಕ್ಷೆ ನಮ್ಮದಾಗಿದೆ. ಆದರೆ ಏನಾಗುವುದೆಂಬುದನ್ನು ವಾಸ್ತವಾಂಶಗಳು ನಿರ್ಧರಿಸುತ್ತವೆ’ ಎಂದು ಸಂದರ್ಶನವೊಂದರಲ್ಲಿ ಅವರು ಸುಳಿವು ನೀಡಿದ್ದಾರೆ. ಈ ಹಣಕಾಸು ವರ್ಷಾಂತ್ಯಕ್ಕೆ ದೇಶದ ಆರ್ಥಿಕತೆಯನ್ನು 1 ಲಕ್ಷ ಕೋಟಿ ರೂ.ಗೆ ಏರಿಸಬೇಕೆಂಬ ಸರ್ಕಾರದ ಮಹತ್ವಾಕಾಂಕ್ಷೆಯ ಭಾಗವಾಗಿ ಈ ಎರಡೂ ಮಹತ್ವದ ಸಂಸ್ಥೆಗಳನ್ನು ಮಾರಾಟ ಮಾಡುವ ಕಾರ್ಯತಂತ್ರದ ಕುರಿತು ಅವರು ಉಲ್ಲೇಖಿಸಿದರು.
ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸುವ ಕುರಿತು ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಹೂಡಿಕೆದಾರರು ತೀವ್ರ ಆಸಕ್ತಿ ಹೊಂದಿರುವ ಕುರಿತು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಆದರೆ ಒಂದು ವರ್ಷದ ಹಿಂದೆ ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಮಾರಾಟಕ್ಕಿಟ್ಟಿದ್ದಾಗ ಹೂಡಿಕೆದಾರರ ಪ್ರತಿಕ್ರಿಯೆ ನೀರಸವಾಗಿದ್ದ ಕಾರಣ ಮಾರಾಟ ಪ್ರಕ್ರಿಯೆಯನ್ನು ಹಿಂದೆಗೆದುಕೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.
ಆರ್ಥಿಕ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸಕಾಲಿಕವಾಗಿ ಕೈಗೊಂಡ ಕೆಲವು ಕ್ರಮಗಳಿಂದಾಗಿ ಕೆಲವು ವಲಯಗಳು ಇದೀಗ ಚೇತರಿಸಿಕೊಂಡಿವೆ; ಕೈಗಾರಿಕೋದ್ಯಮಗಳ ಮಾಲೀಕರು ಇದೀಗ ತಮ್ಮ ವಾರ್ಷಿಕ ವಹಿವಾಟು ಬೆಳವಣಿಗೆ ಮಾಡಿಕೊಂಡಿದ್ದಾರೆ; ಅವರಲ್ಲಿ ಅನೇಕರು ಹೊಸದಾಗಿ ಬಂಡವಾಳ ಹೂಡಿಕೆಗೂ ಚಿಂತಿಸುತ್ತಿದ್ದಾರೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೊಂಡರು.






