ಸೌದಿ ಅರೇಬಿಯಾ: ಹೌಸ್ ಡ್ರೈವರ್ ಗಳ ಸಂಖ್ಯೆಯಲ್ಲಿ ಹೆಚ್ಚಳ

ರಿಯಾದ್: ಸೌದಿ ಅರೇಬಿಯಾದಲ್ಲಿ ಮನೆ ಚಾಲಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಮಹಿಳೆಯರಿಗೆ ವಾಹನ ಚಲಾಯಿಸಲು ಅವಕಾಶ ಕಲ್ಪಿಸಿರುವುದರಿಂದ ವಿದೇಶಿ ಚಾಲಕರ ಬೇಡಿಕೆ ಕಡಿಮೆಯಾಗಲಿದೆ ಎಂದು ಈ ಹಿಂದೆ ನಿರೀಕ್ಷಿಸಲಾಗಿತ್ತು. ಆದರೆ ಇದಕ್ಕೆ ವಿರುದ್ಧವಾದ ಲೆಕ್ಕಾಚಾರ ಈಗ ಹೊರಬಂದಿದೆ.

ಮಹಿಳೆಯರಿಗೆ ಚಾಲನಾ ಪರವಾನಗಿ ನೀಡುವ ಕ್ರಮವು ಕಳೆದ ವರ್ಷ ಜೂನ್ 24 ರಂದು ಜಾರಿಗೆ ಬಂದಿದ್ದು ಸೌದಿ ಇತಿಹಾಸದಲ್ಲಿ ಮಹತ್ವದ ಘೋಷಣೆ ಎನ್ನಲಾಗಿತ್ತು. ಈ ಮೂಲಕ ಮನೆ ಚಾಲಕರಿಗೆ, ವಿಶೇಷವಾಗಿ ಪುರುಷ ಚಾಲಕರಿಗೆ ನೀಡಲಾಗುವ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡಲಿದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಅಧಿಕೃತ ಅಂಕಿಅಂಶಗಳ ಪ್ರಕಾರ, ಸೌದಿಯಲ್ಲಿ ಮನೆ ಚಾಲಕರ ಸಂಖ್ಯೆ ಹೆಚ್ಚಾಗಿರುವುದಾಗಿ ತಿಳಿದು ಬಂದಿದೆ.

2018 ರ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮನೆ ಚಾಲಕರ ಸಂಖ್ಯೆಯು 22.7% ಹೆಚ್ಚಾಗಿದೆ. ಸೌದಿ ಅರೇಬಿಯಾದ ಒಟ್ಟು 31,09,173 ಗೃಹ ಕಾರ್ಮಿಕರ ಪೈಕಿ 16,66,042 ಮಂದಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪೈಕಿ 459 ಮಂದಿ ವಿದೇಶಿ ಮಹಿಳಾ ಚಾಲಕರು ದುಡಿಯುತ್ತಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 13,57,228 ಗೃಹ ಚಾಲಕರು ಇದ್ದರು. ಮಹಿಳೆಯರಿಗೆ ಚಾಲನಾ ಪರವಾನಗಿ ನೀಡಿದ ನಂತರದ ಬೆಳವಣಿಗೆಯಲ್ಲಿಯೂ ವಿದೇಶಿ ಗೃಹ ಚಾಲಕರ ಸಂಖ್ಯೆ 3,08,814 ರಷ್ಟು ಹೆಚ್ಚಾಗಿದ್ಧು, ಅಚ್ಚರಿ ಮೂಡಿಸಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!