ರಾಜ್ಯ ವಕ್ಫ್ ಬೋರ್ಡ್‌ ಗೌರವ ಧನ ಮದ್ರಸ ಶಿಕ್ಷಕರಿಗೂ ಲಭಿಸಲಿ

ಮಂಗಳೂರು, ಸೆ.24: ರಾಜ್ಯದ ವಕ್ಫ್ ಬೋರ್ಡ್‌ನ ಅಧೀನದಲ್ಲಿರುವ ಮಸೀದಿ ಮತ್ತು ಮದ್ರಸಗಳಲ್ಲಿ ಸೇವೆ ಸಲ್ಲಿಸುವ ಇಮಾಮ್ ಮತ್ತು ಮುಅದ್ಸಿನ್‌ರಿಗೆ ಗೌರವ ಧನ ವಿತರಿಸುವ ವಿಶೇಷ ಯೋಜನೆಯಡಿ ದ.ಕ. ಜಿಲ್ಲೆ ಪ್ರಥಮ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ದ.ಕ. ಜಿಲ್ಲೆಯ 574 ಇಮಾಮ್ ಮತ್ತು 511 ಮುಅದ್ಸಿನ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 56 ಇಮಾಮ್ ಮತ್ತು 50 ಮುಅದ್ಸಿನ್‌ಗಳು ಗೌರವ ಧನ ಪಡೆಯುತ್ತಿದ್ದಾರೆ. 2019ರ ಜೂನ್ ತಿಂಗಳ ವರದಿ ಪ್ರಕಾರ ರಾಜ್ಯದ 30 ಜಿಲ್ಲೆಯಲ್ಲಿ 7,012 ಇಮಾಮ್ ಮತ್ತು 6,794 ಮುಅದ್ಸಿನ್‌ಗಳ ಸಹಿತ ಒಟ್ಟು 13,806 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಅಂದರೆ, 7,012 ಇಮಾಮರು ಜೂನ್‌ವರೆಗೆ 280.48 ಲಕ್ಷ ರೂ., ಮುಅದ್ಸಿನ್‌ರು 203.82 ಲಕ್ಷ ರೂ. ಸಹಿತ ಒಟ್ಟು 13,806 ಮಂದಿ 484.30 ಲಕ್ಷ ರೂ. ಪಡೆದಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇದಕ್ಕೆ ಚಾಲನೆ ನೀಡಲಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇದು ಅನುಷ್ಠಾನಗೊಂಡಿತ್ತು. ಅಂದರೆ ರಾಜ್ಯದ ವಕ್ಫ್ ಬೋರ್ಡ್ ನಲ್ಲಿ ನೋಂದಣಿಗೊಂಡ ಮಸೀದಿಗಳಲ್ಲಿ ಕೆಲಸ ಮಾಡುವ ಇಮಾಮ್ ಮತ್ತು ಮುಅದ್ಸಿನ್‌ರಿಗೆ ಪ್ರತೀ ತಿಂಗಳಿಗೊಮ್ಮೆ ಗೌರವಧನ ನೀಡುವ ಯೋಜನೆ ಇದಾಗಿದೆ. ಅಂದರೆ ಇಮಾಮರಿಗೆ 4 ಸಾವಿರ ರೂ. ಮತ್ತು ಮುಅದ್ಸಿನ್‌ರಿಗೆ 3 ಸಾವಿರ ರೂ. ನೀಡಲಾಗುತ್ತದೆ. ಸದ್ಯ ರಾಜ್ಯದಲ್ಲಿ 8,500ಕ್ಕೂ ಅಧಿಕ ಮಸೀದಿಗಳು ವಕ್ಫ್ ಬೋರ್ಡ್‌ನಲ್ಲಿ ನೋಂದಣಿಗೊಂಡಿವೆ. ನೋಂದಣಿ ಸಂಖ್ಯೆಗೆ ಹೋಲಿಸಿದರೆ ಮಾಸಿಕ ಗೌರವಧನ ಪಡೆಯುವ ಇಮಾಮ್-ಮುಅದ್ಸಿನ್‌ರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳ ಆಗಬೇಕಿದೆ.

ಕೆಲವು ಕಡೆ ಹಲವು ಮಂದಿ ಇದರ ದುರುಪಯೋಗ ಮಾಡಿದ್ದೂ ಇದೆ. ದ.ಕ. ಜಿಲ್ಲೆಯಲ್ಲೇ ಒಂದೆರಡು ಪ್ರಕರಣವನ್ನು ಪತ್ತೆ ಹಚ್ಚಿದ ಅಧಿಕಾರಿಗಳು ತಪ್ಪಿತಸ್ಥರಿಂದ ಹಣ ವಾಪಸ್ ಪಡೆದು ಇಲಾಖೆಗೆ ಮರಳಿಸಿ ಎಚ್ಚರಿಕೆ ನೀಡಿದ ವಿದ್ಯಮಾನ ಕೂಡ ಬೆಳಕಿಗೆ ಬಂದಿವೆ. ಪ್ರತಿಯೊಂದು ಮಸೀದಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು ತಮ್ಮ ಮಸೀದಿಗಳಲ್ಲಿ ಸೇವೆ ಸಲ್ಲಿಸುವ ಇಮಾಮ್ ಮತ್ತು ಮುಅದ್ಸಿನ್‌ರ ಅರ್ಜಿಯೊಂದಿಗೆ ಆಧಾರ್ ಮತ್ತು ಬ್ಯಾಂಕ್ ಖಾತೆಯ ದ್ವಿಪ್ರತಿ ಹಾಗೂ ಅವರು ಅಲ್ಲಿ ಸೇವೆ ಸಲ್ಲಿಸುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಅದರೊಂದಿಗೆ ಅವರ ಪರಿಷ್ಕೃತ ಬ್ಯಾಂಕ್ ವ್ಯವಹಾರ ಪಟ್ಟಿಯನ್ನೂ ಸಲ್ಲಿಸಬೇಕು. ಪ್ರತೀ ತಿಂಗಳ 20ರೊಳಗೆ ಆಯಾ ಮಸೀದಿಯಲ್ಲಿ ಅರ್ಜಿ ಸಲ್ಲಿಸಿದ ಇಮಾಮ್ ಮತ್ತು ಮಅದ್ಸಿನ್‌ರು ಸೇವೆ ಸಲ್ಲಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಜವಾಬ್ದಾರಿ ವಕ್ಫ್ ಅಧಿಕಾರಿಗಳದ್ದಾಗಿದೆ. ಅದಕ್ಕಾಗಿ ಇಮಾಮ್/ಮುಅದ್ಸಿನ್ ಅಲ್ಲದೆ ಆಡಳಿತ ಮಂಡಳಿಯೊಂದಿಗೂ ಸಮಾಲೋಚಿಸಬಹುದಾಗಿದೆ.

ಒಂದು ಮಸೀದಿಗೆ ಹೊಂದಿಕೊಂಡಂತೆ ಮದ್ರಸವೂ ಇರುತ್ತದೆ. ಮಸೀದಿಯ ಇಮಾಮರು/ಮುಅದ್ಸಿನ್‌ರ ಮಸೀದಿಯೊಂದಿಗೆ ಮದ್ರಸದಲ್ಲೂ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಇದರೊಂದಿಗೆ ಮದ್ರಸದಲ್ಲಿ ಸದರ್ ಮುಅಲ್ಲಿಂ (ಮುಖ್ಯಶಿಕ್ಷಕ) ಮತ್ತು ಮುಅಲ್ಲಿಂ (ಶಿಕ್ಷಕರೂ) ಕೂಡ ಸೇವೆ ಸಲ್ಲಿಸುತ್ತಾರೆ. ಮದ್ರಸ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಿಸಲು, ಮಕ್ಕಳ ಶಿಕ್ಷಣ ವೃದ್ಧಿಯಲ್ಲಿ ಮುಅಲ್ಲಿಮರ ಪಾತ್ರವೂ ಇದೆ. ಪ್ರತಿಯೊಂದು ಮದ್ರಸದಲ್ಲಿ ಕನಿಷ್ಠ 3ರಿಂದ 4 ಮಂದಿ (ಕೆಲವು ಕಡೆ ಅದಕ್ಕಿಂತಲೂ ಹೆಚ್ಚು) ಮುಅಲ್ಲಿಮರು ಕೆಲಸ ಮಾಡುತ್ತಿದ್ದಾರೆ. ಇಮಾಮರು-ಮುಅದ್ಸಿನರಿಗೆ ಗೌರವಧನ ನೀಡುವುದರೊಂದಿಗೆ ಮುಅಲ್ಲಿಮರಿಗೂ ಗೌರವಧನ ನೀಡಬೇಕು ಎಂಬ ಬೇಡಿಕೆಯೂ ಇದೆ. ಈ ಬಗ್ಗೆ ಕೆಲವು ಧಾರ್ಮಿಕ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ, ಈವರೆಗೆ ಇದಕ್ಕೆ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಈ ಬೇಡಿಕೆಯನ್ನು ಪರಿಗಣಿಸುವಂತೆ ಸಂಘಟನೆಗಳು ಆಗ್ರಹಿಸಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!