janadhvani

Kannada Online News Paper

ನವದೆಹಲಿ .ಸೆಪ್ಟೆಂಬರ್,23: ಆಧಾರ್ ಕಾರ್ಡ್, ಪಾಸ್​ಪೋರ್ಟ್​, ವಾಹನ ಚಾಲನಾ ಪರವಾನಗಿ ಹಾಗೂ ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ಡಿಜಿಟಲ್ ಸೇವೆಗಳನ್ನು ಒಂದೇ ಕಾರ್ಡ್ ಮೂಲಕ ಪಡೆಯುವ ವಿವಿದೋದ್ದೇಶ ಗುರುತಿನ ಚೀಟಿಯನ್ನು ಶೀಘ್ರದಲ್ಲಿ ದೇಶದ ಪ್ರಜೆಗಳಿಗೆ ನೀಡಲಾಗುವುದು. ಅಲ್ಲದೆ, 2021ರಲ್ಲಿ ದೇಶದ ಜನಗಣತಿಯನ್ನು ಆ್ಯಪ್ ಮೂಲಕ ನಡೆಸಲಾಗುವುದು. ಮೊಬೈಲ್​ಗಳ ಸಹಾಯದಿಂದ ದತ್ತಾಂಶಗಳನ್ನು ಸಂಗ್ರಹಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ನಾವು ಆಧಾರ್ ಕಾರ್ಡ್, ಪಾಸ್​ಪೋರ್ಟ್​, ಬ್ಯಾಂಕ್ ಖಾತೆ, ವಾಹನ ಚಾಲನಾ ಪರವಾನಗಿ ಮತ್ತು ಮತದಾರರ ಗುರುತಿನ ಚೀಟಿಯಂತಹ ಎಲ್ಲಾ ಉಪಯೋಗಗಳನ್ನು ಕೇವಲ ಒಂದೇ ಕಾರ್ಡ್​ನಲ್ಲಿ ಹೊಂದಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಜನ ಸಾಮಾನ್ಯರಿಗೆ ಸಾಕಷ್ಟು ಉಪಯೋಗವಾಗಲಿದೆ. ಅಲ್ಲದೆ, ಒಬ್ಬ ವ್ಯಕ್ತಿಯು ಸತ್ತಾಗ ಜನಸಂಖ್ಯೆಯ ದತ್ತಾಂಶದಲ್ಲಿ ಮಾಹಿತಿಯನ್ನು ಸ್ವಯಂಚಾಲಿತವಾಗಿ ನವೀಕರಿಸುವ ತಂತ್ರಜ್ಞಾನವನ್ನೂ ಇದರಲ್ಲಿ ಅಳವಡಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.

ದೇಶದ ಜನಸಂಖ್ಯಾ ಗಣತಿ ನೀರಸ ಕೆಲಸವೇನಲ್ಲ. ಸರ್ಕಾರದ ಮಹತ್ವದ ಯೋಜನೆಗಳನ್ನು ಜನರಿಗೆ ಒದಗಿಸಲು ಇದು ಸಹಾಯ ಮಾಡುತ್ತದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್​) ಎಂಬುದು ದೇಶದ ಅಸಂಖ್ಯಾತ ಜನರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಕೊನೆಯ ಜನಗಣತಿಯನ್ನು 2011ರಲ್ಲಿ ನಡೆಸಲಾಗಿತ್ತು. ಮನೆ ಮನೆಗೆ ತೆರಳಿ ಜನಸಂಖ್ಯಾ ಗಣತಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ದೇಶದಲ್ಲಿ 121 ಕೋಟಿ ಜನಸಂಖ್ಯೆ ಇತ್ತು. ಆದರೆ, ಜನಗಣತಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಆ್ಯಪ್ ಮೂಲಕ ದತ್ತಾಂಶಗಳನ್ನು ಸಂಗ್ರಹಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಇದೀಗ ಮುಂದಾಗಿದೆ. ಮುಂದಿನ ಜನಗಣತಿ ಸಂದರ್ಭದಲ್ಲಿ ಮನೆ ಮನೆಗೆ ತೆರಳಲಿರುವ ಸ್ವಯಂ ಸೇವಕರು ಮೊಬೈಲ್ ಫೋನ್ ಮೂಲಕ ಜನರೇ ತಮ್ಮ ಗುರುತನ್ನು ದಾಖಲಿಸುವಂತೆ ಪ್ರೋತ್ಸಾಹಿಸಲಿದ್ದಾರೆ ಎಂದರು.

ಮುಂದಿನ ಜನಗಣತಿಯನ್ನು 2021ರ ಮಾರ್ಚ್.1 ರಿಂದ ಆರಂಭಿಸಿ ಮೂರು ಹಂತದಲ್ಲಿ ಮುಗಿಸಲಾಗುವುದು ಕಳೆದ ಮಾರ್ಚ್ ತಿಂಗಳಲ್ಲೇ ಕೇಂದ್ರ ಸರ್ಕಾರ ಈ ಕುರಿತು ಘೋಷಿಸಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಿಮಭರಿತ ಪ್ರದೇಶಗಳಲ್ಲಿ 2020ರ ಅಕ್ಟೋಬರ್ ಮೊದಲ ವಾರದಲ್ಲೇ ಜನಗಣಿತಿ ನಡೆಸಲಾಗುವುದು ಎಂದು ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ.

error: Content is protected !! Not allowed copy content from janadhvani.com