janadhvani

Kannada Online News Paper

ಬಾಬರೀ ಮಸೀದಿ ಭೂ ವಿವಾದ: ಅ.18 ಅಂತಿಮ ಗಡುವು

ನವದೆಹಲಿ: ಅಯೋಧ್ಯೆ ಬಾಬ್ರಿ ಮಸೀದಿ, ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ಅಂತಿಮ ಘಟ್ಟ ತಲುಪಿದ್ದು, ಅ.18ಕ್ಕೆ ಗಡುವು ನೀಡಿರುವ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಮಂಗಳವಾರ ಸಮ್ಮತಿ ನೀಡಿದೆ.

ಅಯೋಧ್ಯೆ ಭೂ ವಿವಾದ ವಿಚಾರಣೆ ಅಕ್ಟೋಬರ್ 18ರೊಳಗೆ ಮುಕ್ತಾಯಗೊಳ್ಳಬೇಕಾಗಿದೆ. ಒಂದು ವೇಳೆ ದೂರುದಾರರು ಇಚ್ಛಿಸಿದ್ದಲ್ಲಿ ಮಂದಿರ-ಮಸೀದಿ ವಿವಾದವನ್ನು ಮಧ್ಯಸ್ಥಿಗೆ ಮೂಲಕವೂ ಇತ್ಯರ್ಥಪಡಿಸಿಕೊಳ್ಳಬಹುದು. ಅ.18ರೊಳಗೆ ವಿಚಾರಣೆ ಪೂರ್ಣಗೊಳ್ಳಲೇಬೇಕಾಗಿದೆ. ಒಂದು ವೇಳೆ ದಿನಂಪ್ರತಿ ಒಂದು ಗಂಟೆ ಹೆಚ್ಚು ವಿಚಾರಣೆ ನಡೆಸಲು ಸಿದ್ಧ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ದೂರುದಾರರು ಮಧ್ಯಸ್ಥಿಕೆ ಮೂಲಕವೂಬ ಬಗೆಹರಿಸಿಕೊಳ್ಳಬಹುದು ಎಂದು 26ನೇ ದಿನದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತಿಳಿಸಿದೆ.

ವಿವಾದ ಸಂಬಂಧ ಅ.18ರೊಳಗೆ ವಿಚಾರಣೆ ಪೂರ್ಣಗೊಳಿಸಿದರೆ, ಡಿಸೆಂಬರ್ ಅಂತ್ಯದೊಳಗೆ ನ್ಯಾಯಾಲಯ ತೀರ್ಪು ನೀಡಬಹುದು ಎಂದು ವರದಿಗಳಿಂದ ತಿಳಿದುಬಂದಿದೆ. ಮುಸ್ಲಿಮರ ಕಡೆಯವರು ಸೆ. 28ರೊಳಗೆ ತನ್ನ ವಾದ ಮಂಡನೆ ಮುಗಿಸುವುದಾಗಿ ತಿಳಿಸಿದ್ದಾರೆ. ಶ್ರೀರಾಮ ದೇವರ ಪರ ವಕೀಲರು ಎರಡು ದಿನದಲ್ಲಿ ಉತ್ತರ ರೂಪದಲ್ಲಿ ಪ್ರತಿವಾದ ಮಂಡನೆ ಮುಗಿಸಲು ಒಪ್ಪಿಕೊಂಡಿದ್ದಾರೆ. ಆ ಬಳಿಕ ಇನ್ನೂ ಮೂರು ದಿನಗಳ ಕಾಲ ಉಳಿದೆಲ್ಲಾ ವಾದ ಪ್ರತಿವಾದಗಳನ್ನು ನಡೆಸಲು ಯೋಜಿಸಲಾಗಿದೆ.

ರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಮೊದಲಾದವರು ಇರುವ ಮಧ್ಯಸ್ಥಿಕೆ ಮಂಡಳಿಯು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಮಾರ್ಚ್ ತಿಂಗಳಲ್ಲೇ ಮಾತುಕತೆಯ ಪ್ರಯತ್ನಗಳನ್ನ ನಡೆಸಿತ್ತು. ಆದರೆ, ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಯಾವ ಕಡೆಯವರೂ ಕೂಡ ಒಂದು ಒಮ್ಮತಕ್ಕೆ ಬರಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವೇ ಈ ಪ್ರಕರಣವನ್ನು ಕೈಗೆತ್ತಿಕೊಂಡು ಪ್ರತೀ ದಿನ ವಿಚಾರಣೆ ನಡೆಸಿ ಆದಷ್ಟೂ ಬೇಗ ಮುಗಿಸಲು ನಿರ್ಧರಿಸಿದೆ. ಅದರಂತೆ ಆ. 6ರಿಂದ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಈಗ ಈ ವಿಚಾರಣೆಗೆ ಇನ್ನಷ್ಟು ವೇಗ ತುಂಬಲು ನಿರ್ಧರಿಸಿರುವ ಸಿಜೆಐ ರಂಜನ್ ಗೊಗೋಯ್ ಅವರು ಅಕ್ಟೋಬರ್ 18ಕ್ಕೆ ಡೆಡ್​ಲೈನ್ ನಿಗದಿ ಮಾಡಿದ್ದಾರೆ.

ಅಯೋಧ್ಯೆಯ ಬಾಬ್ರಿ ಮಸೀದಿ ಇದ್ದ ಜಾಗದ 2.77 ಎಕರೆ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬುದೇ ಈಗ ಈ ಪ್ರಕರಣದ ವಸ್ತುವಾಗಿದೆ. ಬಾಬ್ರಿ ಮಸೀದಿ ಕಟ್ಟುವ ಮುಂಚೆ ಈ ಜಾಗದಲ್ಲಿ ರಾಮನ ದೇವಸ್ಥಾನವಿತ್ತು ಎಂಬುದು ಹಿಂದೂಗಳ ವಾದವಾಗಿದೆ. ಬಾಬ್ರಿ ಮಸೀದಿ ಇಡೀ ಜಾಗ ತಮಗೆ ಸೇರಿದ್ದು ಎಂಬುದು ಸುನ್ನಿ ವಕ್ಫ್ ಮಂಡಳಿಯ ವಾದ. ಹಾಗೆಯೇ ನಿರ್ಮೋಹಿ ಅಖಾಡ ಕೂಡ ಇದು ತನಗೆ ಸೇರಿದ್ದೆಂದು ಹೇಳುತ್ತಿದೆ. 2010ರಲ್ಲಿ ಅಲಾಹಾಬಾದ್ ಉಚ್ಚ ನ್ಯಾಯಾಲಯವು ಈ ಮೂರೂ ಪಕ್ಷಗಳಿಗೆ ವಿವಾದಿತ ಭೂಮಿಯನ್ನು ಸಮಾನವಾಗಿ ಹಂಚುವ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಹಲವು ಮೇಲ್ಮನವಿಗಳು ದಾಖಲಾದವು. ಈಗ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಇದರ ವಿಚಾರಣೆ ನಡೆಸುತ್ತಿದೆ.

error: Content is protected !! Not allowed copy content from janadhvani.com