ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ- ಸೆ.24ರಂದು ಬೃಹತ್​ ಪ್ರತಿಭಟನೆ

ಬೆಂಗಳೂರು: ನೆರೆ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, ಸೆ. 24ರಂದು ಬೆಳಗಾವಿಯಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಸ್ಪಂದಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಗಾಂಧಿ ಪ್ರತಿಮೆ ಬಳಿ ಒಂದು ಗಂಟೆ ಕಾಲ ಸಾಂಕೇತಿಕ ಧರಣಿಯನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯ, ಕೇಂದ್ರ ಸರ್ಕಾರ ಸಂತ್ರಸ್ತರಿಗೆ ಸ್ಪಂದಿಸದಿದ್ದರೆ ದೊಡ್ಡ ಪ್ರಮಾಣದ ಹೋರಾಟ ಮಾಡಲಾಗುವುದು. ಮೊದಲ ಹಂತದಲ್ಲಿ ಬೆಳಗಾವಿಯಲ್ಲಿ ಇದೇ 24ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಆ ಮೂಲಕ ರಾಜ್ಯ, ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ‌ ಮಾಡುತ್ತೇವೆ ಎಂದು ಹೇಳಿದರು.

ಸರಿಯಾದ ರೀತಿಯಲ್ಲಿ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ ಆಗಿದೆ. ಮನೆ ಕಳೆದುಕೊಂಡರಿಗೆ 10 ಸಾವಿರ ಕೊಟ್ಟಿದ್ದಾರೆ. ಆದರೆ, ಎಲ್ಲರಿಗೂ ಸರಿಯಾದ ರೀತಿಯಲ್ಲಿ ಹಂಚಿಕೆ ಆಗಿಲ್ಲ. ಶೆಡ್‌ಗಳನ್ನು ಹಾಕುತ್ತೇವೆ ಎಂದು ಹೇಳಿದ್ದರು. ಇದುವರೆಗೆ ಮಾಡಿಲ್ಲ. ಪುನರ್ವಸತಿ ಕಲ್ಪಿಸುವ ಕೆಲಸ ಆಗಿಲ್ಲ. ಮನೆ ಕಳೆದುಕೊಂಡವರಿಗೆ, ಬೆಳೆ ಕಳೆದುಕೊಂಡವರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಸರ್ವೇನೂ ಮಾಡಿಲ್ಲ. ರಾಜ್ಯ ಸರ್ಕಾರ ನಿದ್ರಾವಸ್ಥೆಯಲ್ಲಿ ಇದೆ. ಒಂದು ತಿಂಗಳ ಕಾಲ ಯಡಿಯೂರಪ್ಪ ಒಬ್ಬರೇ ಇದ್ದರು. ಒಂದು ಲಕ್ಷ ಕೋಟಿ ರಾಜ್ಯದಲ್ಲಿ ನಷ್ಟ‌ ಆಗಿದೆ. ಆದರೆ ಮೋದಿ ಒಂದೇ ಒಂದು ರೂಪಾಯಿ ನೀಡಿಲ್ಲ. ಬೆಂಗಳೂರಿಗೆ ಬಂದಿದ್ದರೂ ಪ್ರವಾಹ ಸ್ಥಳಕ್ಕೆ ಹೋಗಿಲ್ಲ ಎಂದು ಕಿಡಿಕಾರಿದರು.

ಜನರ ಪರ ಹೋರಾಟ ಮಾಡುವುದೇ ನಮ್ಮ ಕೆಲಸ. ಆಯ್ತಪ್ಪ ಏನಾದ್ರೂ ಪರಿಹಾರ ಕೊಟ್ಟಿದ್ದಾರಾ? ಮೂಡಿಗೆರಯಲ್ಲಿ ರೈತ ಚೆನ್ನಪ್ಪ ಗೌಡ ಆತ್ಮಹತ್ಯೆ ಮಾಡಿಕೊಂಡರು. ಇವತ್ತಿನವರೆಗೂ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಅಧಿವೇಶನ ಕರೆಯಲ್ಲ, ಸರ್ವ ಪಕ್ಷ ಸಭೆನೂ ಕರೆಯಲ್ಲ. ಬರೀ ಬಿಜೆಪಿ ‌ಶಾಸಕರ ಸಭೆ ಮಾತ್ರ ನಡೆಸುತ್ತಾರೆ. ಪ್ರವಾಹ ಆಗಿರುವ ಕಡೆ ಬಿಜೆಪಿಯವರು ಮಾತ್ರ ಇದ್ದಾರಾ? ಕಾಂಗ್ರೆಸ್, ಜೆಡಿಎಸ್‌ನವರು ಇಲ್ವಾ? ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಆಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದಕ್ಕೆ ಇವರಿಗೆ ಭಯ. ಪರಮೇಶ್ವರ್ ದೆಹಲಿಯಲ್ಲಿರಬೇಕು. ಬೆಳಗಾವಿ ಭಾಗದವರು ಬಂದಿದ್ದರು. ಏಳೆಂಟು ಜನರು ಮಾತ್ರ ಬಂದಿಲ್ಲ. ಕೆಲವರು ಪತ್ರ ಬರೆದಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!