janadhvani

Kannada Online News Paper

ದುಬೈ: ಪ್ರಯಾಣಿಕನ ಲಗೇಜ್ ನಿಂದ ಮಾವಿನ ಹಣ್ಣು ಕದ್ದ ಪ್ರಕರಣ- ವಿಚಾರಣೆ ಆರಂಭ

ದುಬೈ: ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಸಾಮಾನು ಸರಂಜಾಮುಗಳಿಂದ ಮಾವಿನ ಹಣ್ಣು ಕದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ದ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. 27 ವರ್ಷದ ಭಾರತೀಯ ನಾಗರಿಕ ಎರಡು ಮಾವಿನಹಣ್ಣುಗಳನ್ನು ದೋಚಿದ್ದ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಇದು 6 ದಿರ್ಹಂ ಬೆಲೆ ಬಾಳುತ್ತದೆ.

ಈ ಘಟನೆ 2017 ಆಗಸ್ಟ್ 11ರಂದು ಸಂಭವಿಸಿದೆ. ವಿಮಾನ ನಿಲ್ದಾಣದ ನೌಕರನನ್ನು ಸರಕಾರಿ ಅಧಿಕಾರಿ ಎಂದು ಪರಿಗಣಿಸಿ ಕಳ್ಳತನದ ಆರೋಪ ಹೊರಿಸಲಾಗಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ. ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಆತ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿ ಪ್ರಯಾಣಿಕರ ಸಾಮಾನುಗಳನ್ನು ಕಂಟೇನರ್‌ನಿಂದ ಕನ್ವೇಯರ್ ಬೆಲ್ಟ್‌ಗೆ ಸಾಗಿಸುವುದು ಆತನ ಕೆಲಸವಾಗಿತ್ತು. ಈ ಮಧ್ಯೆ, ಭಾರತಕ್ಕೆ ಸಾಗಿಸಬೇಕಿದ್ದ ಸಾಮಾನು ಸರಂಜಾಮುಗಳಿಂದ ಆತ ಎರಡು ಮಾವಿನ ಹಣ್ಣುಗಳನ್ನು ಕಳವು ಮಾಡಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು. ಬಾಯಾರಿಕೆ ಉಂಟಾಗಿ ನೀರು ಹುಡುಕಾಟದಲ್ಲಿದ್ದ ವೇಳೆ ಈ ಮಾವಿನ ಹಣ್ಣುಗಳನ್ನು ಕದ್ದಿದ್ದೇನೆ ಎಂದು ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

2018 ರ ಏಪ್ರಿಲ್‌ನಲ್ಲಿ ಪೊಲೀಸರು ಆತನನ್ನು ಕರೆದು ಪ್ರಶ್ನಿಸಿದರು. ತರುವಾಯ ಬಂಧನವನ್ನು ದಾಖಲಿಸಲಾಯ್ತು ಮತ್ತು ಆತನ ನಿವಾಸದಲ್ಲಿ ಶೋಧ ಕಾರ್ಯ ನಡೆಸಲಾಯಿತು. ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಆದರೆ, ಮಾವಿನ ಚೀಲವನ್ನು ತೆಗೆದುಕೊಳ್ಳುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ನೋಡಿದ್ದೇನೆ ಎಂದು ಭದ್ರತಾ ಅಧಿಕಾರಿ ಹೇಳಿದ್ದಾರೆ. ನ್ಯಾಯಾಲಯ ಈ ಪ್ರಕರಣದ ಬಗ್ಗೆ ಸೆಪ್ಟೆಂಬರ್ 23 ರಂದು ತೀರ್ಪು ನೀಡಲಿದೆ.

error: Content is protected !! Not allowed copy content from janadhvani.com