janadhvani

Kannada Online News Paper

ಪಾಕಿಸ್ತಾನದ ಗೂಢಚಾರಿಗಳಲ್ಲಿ ಮುಸ್ಲಿಮೇತರರೇ ಹೆಚ್ಚು-ದಿಗ್ವಿಜಯ ಸಿಂಗ್

ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಈ ಬಾರಿ ಬಿಜೆಪಿ, ಬಜರಂಗ ದಳದವರನ್ನು ಐಎಸ್ಐ ಏಜೆಂಟ್ಗಳೆಂದು ಬಣ್ಣಿಸಿದ್ದಾರೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನಿಂದ ಬಿಜೆಪಿ ಮತ್ತು ಬಜರಂಗದಳ ಮೊದಲಾದ ಸಂಘಟನೆಯ ಜನರು ಹಣ ಪಡೆಯುತ್ತಾರೆ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿಯೂ ಆದ ಅವರು ಆರೋಪಿಸಿದ್ದಾರೆ.

ಪಾಕಿಸ್ತಾನದ ಐಎಸ್ಐಗಾಗಿ ಮುಸ್ಲಿಮರಿಗಿಂತ ಮುಸ್ಲಿಮೇತರರೇ ಹೆಚ್ಚಾಗಿ ಗೂಢಚಾರಿಕೆ ಮಾಡುತ್ತಾರೆ. ಇದನ್ನು ತಿಳಿದುಕೊಳ್ಳಬೇಕು ಎಂದು ದಿಗ್ವಿಜಯ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
“ಬಜರಂಗ ದಳ, ಭಾರತೀಯ ಜನತಾ ಪಕ್ಷ ಐಎಸ್ಐನಿಂದ ಹಣ ಪಡೆಯುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು” ಎಂದವರು ಹೇಳಿಕೆ ನೀಡಿದ್ದಾರೆ.

ಮೊನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ವಿವಿಧ ಬ್ಯಾಂಕ್ಗಳ ವಿಲೀನ ಪ್ರಕಟಿಸಿದರು. ಹಾಗೂ ದೇಶದ ಜಿಡಿಪಿ ಪ್ರಗತಿ ದರ ಶೇ. 5ರಷ್ಟು ಇದೆ ಎಂಬ ಅಂಕಿ-ಅಂಶವೂ ನಿನ್ನೆ ಪ್ರಕಟವಾಯಿತು. ಈ ಎರಡು ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, ಮೋದಿ ಸರ್ಕಾರದ ಅಡಿಯಲ್ಲಿ ಆರ್ಥಿಕತೆ ಕುಸಿಯುತ್ತಿದೆ. ಉದ್ಯೋಗ ಪರಿಸ್ಥಿತಿ ಚಿಂತಾಜನಕವಾಗಿದೆ. ಕೊರತೆ ನೀಗಿಸಲು ಕೇಂದ್ರ ಸರ್ಕಾರ ಆರ್ಬಿಐನಿಂದಲೇ ಹಣ ಪಡೆಯುತ್ತಿದೆ ಎಂದು ಟೀಕಿಸಿದರು.

ದಿಗ್ವಿಜಯ್ ಸಿಂಗ್ ಅವರ ಮುಸ್ಲಿಮೇತರ ಗೂಢಚಾರಿಕೆ ಹೇಳಿಕೆ ವಿರುದ್ಧ ಬಿಜೆಪಿ ನಾಯಕರಿಂದ ಆಕ್ಷೇಪ ವ್ಯಕ್ತವಾಗಿದೆ. ದಿಗ್ವಿಜಯ ಸಿಂಗ್ ಅವರು ಸುದ್ದಿಯಲ್ಲಿರಲು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ. ಅವರು ಹಾಗೂ ಇತರ ಕಾಂಗ್ರೆಸ್ ನಾಯಕರು ಪಾಕಿಸ್ತಾನ ಭಾಷೆಯಲ್ಲಿ ಮಾತುಗಳನ್ನಾಡುತ್ತಾರೆ ಎಂದು ಮಧ್ಯ ಪ್ರದೇಶದ ಮತ್ತೊಬ್ಬ ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿದ್ದಾರೆ.

error: Content is protected !! Not allowed copy content from janadhvani.com