ಪ್ರಮುಖ ಜಾಗತಿಕ ಪ್ರವಾಸಿ ಕೇಂದ್ರಗಳ ಪೈಕಿ ಸೌದಿ ಅರೇಬಿಯಾ

ರಿಯಾದ್: ಪ್ರವಾಸೋದ್ಯಮ ವಲಯದಲ್ಲಿ ಸೌದಿಯು ಬಾರಿ ಪ್ರಗತಿ ಸಾಧಿಸಲು ಮುಂದಾಗಿದೆ. ವಿಶ್ವ ಸಂಚಾರಿಗಳನ್ನು ಆಕರ್ಷಿಸಲು ಪ್ರಮುಖ ಜಾಗತಿಕ ಪ್ರವಾಸಿ ಆಕರ್ಷಣಾ ಕೇಂದ್ರಗಳ ಪೈಕಿ ಒಂದನ್ನಾಗಿ ಸೌದಿಯನ್ನು ಪರಿವರ್ತಿಸಲಾಗುವುದು ಎಂದು ಸೌದಿ ಪ್ರವಾಸೋದ್ಯಮ ಆಯೋಗದ ಅಧ್ಯಕ್ಷರು ಹೇಳಿದ್ದಾರೆ. ದೇಶಕ್ಕೆ ಪ್ರವಾಸಿಗರ ಆಗಮನದ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ ಎಂದವರು ತಿಳಿಸಿದ್ದಾರೆ.

ಈ ಯೋಜನೆಯು ವಾರ್ಷಿಕವಾಗಿ ಲಕ್ಷಾಂತರ ಪ್ರವಾಸಿಗರನ್ನು ದೇಶಕ್ಕೆ ಆಕರ್ಷಿಸುವ ಗುರಿಯನ್ನು ಹೊಂದಿದೆ. ಇದರ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿ ಸೀಸನ್ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರತಿಯೊಂದು ಮೇಳಗಳಲ್ಲಿ ಸಂದರ್ಶಕರ ಸಂಖ್ಯೆ ಹೆಚ್ಚುತ್ತಿದೆ.

ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ದೇಶವನ್ನು ಅಗ್ರ ಐದು ತಾಣಗಳ ಪೈಕಿ ಒಂದನ್ನಾಗಿ ಮಾಡುವುದು ಉದ್ದೇಶವಾಗಿದೆ ಎಂದು ಸೌದಿ ಪ್ರವಾಸೋದ್ಯಮ ಇಲಾಖೆ ಮತ್ತು ರಾಷ್ಟ್ರೀಯ ಪರಂಪರೆ ಆಯೋಗದ ಮುಖ್ಯಸ್ಥರಾಗಿರುವ ಅಹ್ಮದ್ ಅಲ್-ಖತೀಬ್ ಹೇಳಿದರು.ಕ್ರೌನ್ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ದೇಶದಲ್ಲಿ ಹೊಸ ಸಾಂಸ್ಕೃತಿಕ ಪರಂಪರೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಇದು ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗಳಿಗೆ ಕಾರಣವಾಗಲಿದೆ ಎಂದು ಅಹ್ಮದ್ ಅಲ್ ಖತೀಬ್ ಹೇಳಿದ್ದಾರೆ.

ತಾಯಿಫ್‌ನಲ್ಲಿ ನಡೆಯುವ ಉಕಾದ್ ಮೇಳದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಎರಡು ವಾರಗಳಲ್ಲಿ ಏಳೂವರೆ ಲಕ್ಷಕ್ಕಿಂತಲೂ ಹೆಚ್ಚು ಪ್ರವಾಸಿಗರು ಮೇಳಕ್ಕೆ ಭೇಟಿ ನೀಡಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಸ್ಥಳೀಯರು ಮುಂದೆ ಬರಬೇಕು ಎಂದು ಅಹ್ಮದ್ ಅಲ್ ಖತೀಬ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!