ಪ್ರೇಮಕ್ಕೆ ಅಡ್ಠಿ: ತಂದೆಯನ್ನೇ ಕತ್ತುಕೊಯ್ದು ಕೊಲೆ ಮಾಡಿದ ಪುತ್ರಿ-ಬೆಚ್ಚಿಬಿದ್ದ ರಾಜಾಜಿನಗರ

ಬೆಂಗಳೂರು, ಆ.19- ಸ್ನೇಹಿತನ ಸಹವಾಸ ಬಿಡು ಎಂದು ಬುದ್ಧಿವಾದ ಹೇಳಿದ ಅಪ್ಪನನ್ನೇ ಅಪ್ರಾಪ್ತೆ ಪುತ್ರಿ ತನ್ನ ಬಾಯ್‍ಫ್ರೆಂಡ್ ಜತೆ ಸೇರಿ ಕತ್ತುಕೊಯ್ದು ಕೊಲೆ ಮಾಡಿ ಶವಕ್ಕೆ ಬೆಂಕಿ ಹಚ್ಚಿರುವ ಘಟನೆ ಇಡೀ ರಾಜಾಜಿನಗರವನ್ನೇ ಬೆಚ್ಚಿಬೀಳಿಸಿದೆ.

ಭಾಷ್ಯಂ ವೃತ್ತದಲ್ಲಿ ಬಟ್ಟೆ ವ್ಯಾಪಾರಿ ಯಾಗಿದ್ದ ಜೈಕುಮಾರ್ (43) ತನ್ನ ಕರುಳ ಕುಡಿಯಿಂದಲೇ ಕೊಲೆಯಾದ ತಂದೆ. ರಾಜಾಜಿನಗರ 5ನೆ ಬ್ಲಾಕ್‍ನ 7ನೆ ಕ್ರಾಸ್‍ನಲ್ಲಿರುವ ತನ್ನ ನಕ್ಷತ್ರ ನಿವಾಸದಲ್ಲಿ ಪತ್ನಿ, ಪುತ್ರಿ ಹಾಗೂ ಪುತ್ರನ ಜತೆ ಜೈಕುಮಾರ್ ತುಂಬು ಜೀವನ ನಡೆಸುತ್ತಿದ್ದರು.

ಈತನ 15 ವರ್ಷದ ಅಪ್ರಾಪ್ತೆ ಪುತ್ರಿ 9ನೆ ತರಗತಿ ವ್ಯಾಸಂಗ ಮಾಡುತ್ತಿದ್ದು, ಪ್ರಥಮ ಬಿಕಾಂ ಓದುತ್ತಿರುವ 18 ವರ್ಷದ ವಿದ್ಯಾರ್ಥಿ ಪ್ರವೀಣ್ ಎಂಬಾತನೊಂದಿಗೆ ಆತ್ಮೀಯ ಸ್ನೇಹ ಬೆಳೆಸಿಕೊಂಡಿದ್ದಳು. ಅಪ್ರಾಪ್ತೆ ಮನೆಗೆ ಸ್ನೇಹಿತ ಪ್ರವೀಣ್ ಪದೇ ಪದೇ ಬಂದು ಹೋಗುತ್ತಿದ್ದ. ಪುತ್ರಿ ಯಾವಾಗಲೂ ತನ್ನ ಬಾಯ್‍ಫ್ರೆಂಡ್ ಜತೆ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದುದು ಜೈಕುಮಾರ್‍ಗೆ ಸರಿ ಕಂಡುಬಂದಿರಲಿಲ್ಲ. ಸ್ನೇಹಿತನ ಸಹವಾಸ ಬಿಡುವಂತೆ ಬುದ್ಧಿವಾದ ಹೇಳಿದ್ದು ಮಗಳಿಗೆ ಹಿಡಿಸಿರಲಿಲ್ಲ.

ಮುಹೂರ್ತ ಫಿಕ್ಸ್ ಮಾಡಿದಳು: ತನ್ನ ಸ್ನೇಹಕ್ಕೆ ಅಡ್ಡಿಪಡಿಸುತ್ತಿದ್ದ ಅಪ್ಪನ ವಿರುದ್ಧ ಅಸಹನೆಗೊಂಡಿದ್ದ ಪುತ್ರಿ ತನ್ನ ತಾಯಿ ಮತ್ತು ತಮ್ಮ ಊರಿಗೆ ತೆರಳುವುದನ್ನು ತಿಳಿದುಕೊಂಡು ಅಪ್ಪನ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದಳು. ಕಾರ್ಯನಿಮಿತ್ತ ಪುದುಚೇರಿಗೆ ತೆರಳುತ್ತಿದ್ದ ತಾಯಿ ಹಾಗೂ ತಮ್ಮನನ್ನು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದು ರೈಲು ಹತ್ತಿಸಿ ಟಾಟಾ ಮಾಡಿ ಮನೆಗೆ ವಾಪಸಾಗುವಾಗಲೇ ತನ್ನ ತಂದೆಯ ಹತ್ಯೆಗೆ ಸ್ಕೆಚ್ ಹಾಕಿದಳು.

ತಾಯಿ ಮತ್ತು ತಮ್ಮನನ್ನು ರೈಲು ಹತ್ತಿಸಲು ತೆರಳುವ ಮುನ್ನವೇ ಮನೆಯಲ್ಲಿದ್ದ ತಂದೆಗೆ ನಿದ್ದೆಮಾತ್ರೆ ಸೇರಿಸಿದ ಹಾಲು ನೀಡಿ ಬಂದಿದ್ದಳು. ರೈಲು ನಿಲ್ದಾಣದಿಂದ ಮನೆಗೆ ವಾಪಸಾಗುವಾಗಲೇ ತನ್ನ ಸ್ನೇಹಿತನಿಗೆ ದೂರವಾಣಿ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಳು. ಸ್ನೇಹಿತ ಮನೆಗೆ ಬಂದ ಕೂಡಲೇ ತಮ್ಮ ಸ್ನೇಹಕ್ಕೆ ಅಡ್ಡಿಯಾಗಿದ್ದ ತಂದೆಯ ಹತ್ಯೆಗೆ ಮುಂದಾದರು. ನಿದ್ದೆ ಮಂಪರಿನಲ್ಲಿದ್ದ ಜೈಕುಮಾರ್ ಅವರನ್ನು ಮನಬಂದಂತೆ ವಿವಿಧ ಕಡೆ ಚಾಕುವಿನಿಂದ ಇರಿದು ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ.

ನಂತರ ಶವವನ್ನು ಬೆಡ್‍ರೂಮ್‍ನಿಂದ ಎಳೆದು ಶೌಚಾಲಯಕ್ಕೆ ಹಾಕಿ ತೊಟ್ಟಿರುವ ಬಟ್ಟೆಗಳನ್ನು ಕಳಚಿ ವಾಷಿಂಗ್‍ಮೆಷಿನ್‍ಗೆ ಹಾಕಿದ್ದಾರೆ. ಬೆಡ್‍ರೂಮ್‍ನ ನೆಲ, ಗೋಡೆ ಮತ್ತು ಹೊದಿಕೆಗಳ ಮೇಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದ್ದಾರೆ. ನಂತರ ಮುಂಜಾನೆ ಹೊರಗೆ ಹೋಗಿ ಒಂದು ಲೀಟರ್‍ನ ಎರಡು ಕುಡಿಯುವ ನೀರಿನ ಬಾಟಲ್‍ಗಳನ್ನು ತೆಗೆದುಕೊಂಡು ನೀರನ್ನು ಕುಡಿದು ಹೊರಗೆ ಚೆಲ್ಲಿ ನಂತರ ಬಂಕ್‍ಗೆ ಹೋಗಿ ಪೆಟ್ರೋಲ್ ತೆಗೆದುಕೊಂಡು ಬಂದು ದೇಹದ ಮೇಲೆ ಎರಚಿ ಬೆಂಕಿ ಹಚ್ಚಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರ ಕಾಲುಗಳಿಗೂ ಪೆಟ್ರೋಲ್ ತಗುಲಿದ್ದರಿಂದ ಬೆಂಕಿ ಹಚ್ಚಿದಾಗ ಸುಟ್ಟ ಗಾಯಗಳಾಗಿವೆ. ನಂತರ ಜೈಕುಮಾರ್ ಅವರ ಪುತ್ರಿ ಟೆರೇಸ್ ಮೇಲೆ ಹೋಗಿ ಬೆಂಕಿ ಬಿದ್ದಿದೆ ಎಂದು ಕೂಗಾಡಿದ್ದಾಳೆ. ಆಗ ಅಕ್ಕಪಕ್ಕದವರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ ವಿಷಯವನ್ನು ರಾಜಾಜಿನಗರ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ರಾಜಾಜಿನಗರ ಪೊಲೀಸರು ಪುತ್ರಿಯನ್ನು ಪ್ರಶ್ನಿಸಿದಾಗ ಬೆಳಗ್ಗೆ ಸಂಬಂಧಿಕರ ಮನೆಗೆ ತಿಂಡಿ ತಿನ್ನಲು ತೆರಳಿದ್ದೆ. ವಾಪಸಾದಾಗ ಈ ಘಟನೆ ನಡೆದಿದೆ ಎಂದು ಹೇಳಿದಳು. ಆದರೆ, ಆಕೆಯ ಮೈಮೇಲಿದ್ದ ಸುಟ್ಟ ಗಾಯಗಳನ್ನು ಕಂಡು ಅನುಮಾನಗೊಂಡ ಪೊಲೀಸರು ಆಕೆ ಮತ್ತು ಆಕೆಯ ಸ್ನೇಹಿತ ಪ್ರವೀಣ್‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇಡೀ ವೃತ್ತಾಂತ ಬೆಳಕಿಗೆ ಬಂದಿದೆ.ತಂದೆಯ ಹತ್ಯೆಗೆ ಸಹಕರಿಸಿದ ಪುತ್ರಿಯ ಸ್ನೇಹಿತ ರಾಜಾಜಿನಗರದ 20ನೆ ಮುಖ್ಯರಸ್ತೆಯ ನಿವಾಸಿ ಪ್ರವೀಣ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ರಾಜಾಜಿನಗರ ಸ್ತಬ್ಧ: ಮಗಳೇ ಸ್ನೇಹಿತನೊಂದಿಗೆ ಸೇರಿ ತಂದೆಯನ್ನು ಹತ್ಯೆ ಮಾಡಿರುವ ಪ್ರಕರಣ ಇಡೀ ರಾಜಾಜಿನಗರವನ್ನೇ ಸ್ತಬ್ಧಗೊಳಿಸಿದೆ. ನಮ್ಮ ಏರಿಯಾದಲ್ಲಿ ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಇಂತಹ ಕೊಲೆಯನ್ನು ನಾವು ಊಹಿಸಿರಲಿಲ್ಲ. ಇದನ್ನು ನಾವು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.

ಬೆಚ್ಚಿಬಿತ್ತು ಜೈನ ಸಮುದಾಯ: ಇಡೀ ವಿಶ್ವಕ್ಕೇ ಅಹಿಂಸಾ ಧರ್ಮವನ್ನು ಬೋಧಿಸಿದ ಜೈನ ಸಮುದಾಯದವರಾದ ಜೈಕುಮಾರ್ ಅವರನ್ನು ಅವರ ಅಪ್ರಾಪ್ತ ಪುತ್ರಿಯೇ ಹತ್ಯೆ ಮಾಡಿರುವುದು ಇಡೀ ಜೈನ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.

ಒಳ್ಳೆ ವ್ಯಕ್ತಿ ಸಾರ್: ಕೊಲೆಯಾದ ಜೈಕುಮಾರ್ ಅವರು ತುಂಬಾ ಒಳ್ಳೆ ವ್ಯಕ್ತಿ. ಬಟ್ಟೆ ವ್ಯಾಪಾರದಲ್ಲಿ ಕೈ ತುಂಬಾ ಸಂಪಾದನೆ ಮಾಡಿ ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇಂತಹ ಒಳ್ಳೆ ವ್ಯಕ್ತಿಗೆ ಕೆಟ್ಟ ಮಗಳು ಇದ್ದಾಳೆಂದು ನಾವು ಊಹಿಸಿರಲಿಲ್ಲ. ನಿನ್ನೆ ಮನೆಗೆ ಬೆಂಕಿ ಬಿದ್ದಾಗ ಆಕಸ್ಮಿಕ ಘಟನೆ ಎಂದು ನಾವೇ ಅಗ್ನಿಶಾಮಕ ದಳಕ್ಕೆ ದೂರು ನೀಡಿದೆವು. ಈಗ ನೋಡಿದರೆ ಮಗಳೇ ತನಗೆ ಜೀವ ಕೊಟ್ಟ ತಂದೆಗೆ ಕೊಳ್ಳಿ ಇಟ್ಟಿದ್ದಾಳೆ ಎಂಬುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎನ್ನುತ್ತಾರೆ ಅಕ್ಕಪಕ್ಕದ ನಿವಾಸಿಗಳು.

ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ತಮ್ಮ ಜೀವವನ್ನೇ ಸವೆಸಿ ಸಂಪಾದನೆ ಮಾಡುತ್ತಾರೆ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕೆಂದು ಕನಸು ಕಾಣುತ್ತಾರೆ. ಇಂತಹ ತಂದೆ-ತಾಯಿಯರಿಗೆ ಮಕ್ಕಳು ಋಣಿಯಾಗಿರಬೇಕು.

Leave a Reply

Your email address will not be published. Required fields are marked *

error: Content is protected !!