ಅಧಿಕಾರಿಗಳು ಎಲ್ಲವನ್ನೂ ನಡೆಸ್ತಾರೆ, ಹಾಗಾದ್ರೆ ನೀವು ಯಾಕ್ರೀ ಯಡಿಯೂರಪ್ಪನವ್ರೇ?

ಬೆಂಗಳೂರು: ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಸಂಪುಟ ರಚನೆಯಾಗದ ಹಿನ್ನೆಲೆ, ಸಚಿವರಿಲ್ಲದಿದ್ದರೇನಂತೆ ಅಧಿಕಾರಿಗಳಿದ್ದಾರೆ. ಅಧಿಕಾರಿಗಳೇ ಎಲ್ಲ ನೋಡಿಕೊಳ್ಳುತ್ತಾರೆ ಎಂಬ ಯಡಿಯೂರಪ್ಪ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದು, ಸಚಿವರಿಲ್ಲದಿದ್ದರೆ ಅಧಿಕಾರಿಗಳು ನೋಡಿಕೊಳ್ತಾರೆ. ಹಾಗಾದ್ರೆ ನೀವ್ಯಾಕೆ ಯಡಿಯೂರಪ್ಪನವರೇ ಇರೋದು..? ಚೀಫ್ ಸೆಕ್ರಟರಿ ಇದ್ದಾರೆ ನಿಮ್ಮ ಪರವಾಗಿ. ಸೆಕ್ರಟರಿಯವರೇ ಅಧಿಕಾರ ಮಾಡ್ತಾರೆ ಬಿಡಿ ನಿಮಗೇಕೆ ಅಧಿಕಾರ ಎನ್ನುವ ಮೂಲಕ ಸಿಎಂ ಯಡಿಯೂರಪ್ಪ ಕಾಲೆಳೆದಿದ್ದಾರೆ.

ಯಡಿಯೂರಪ್ಪ ಸಿಎಂ ಆಗಿ 22 ದಿನಗಳಾಗಿವೆ. ಆದರೆ ಪೂರ್ಣ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. ರಾಜ್ಯದ 7 ಜಿಲ್ಲೆಗಳ 44 ತಾಲೂಕುಗಳಲ್ಲಿ ಬರವಿದೆ. ಉಳಿದ ಜಿಲ್ಲೆಗಳಲ್ಲಿ ಭೀಕರ ಪ್ರವಾಹವಿದೆ. ವಾಡಿಕೆಗಿಂತ 20ರಷ್ಟು ಮಳೆ ಅಧಿಕವಾಗಿದೆ. ಒಂದೆಡೆ ಪ್ರವಾಹದಿಂದ ರೈತರ ಬೆಳೆ ಹಾಳಾಗಿವೆ. ಮತ್ತೊಂದೆಡೆ ಬರಪೀಡಿತ ಪ್ರದೇಶಗಳಲ್ಲಿ ಬಿತ್ತನೆಯನ್ನೇ ಮಾಡಿಲ್ಲ. ಜನಜಾನುವಾರುಗಳ ಪರವಾಗಿ ಇಲ್ಲ ಅಂದ್ರೆ ಸರ್ಕಾರ ಯಾಕಿರಬೇಕು..? ಬರ, ಪ್ರವಾಹ ಪರಿಹಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಅಲ್ಲದೇ, ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ.ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಬರಪರಿಹಾರ ಕಾರ್ಯಕ್ರಮಗಳನ್ನ ಅನುಷ್ಠಾನ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಫೆಬ್ರವರಿಯಿಂದ ಕೇಂದ್ರ ಅನುದಾನವನ್ನೇ ರಿಲೀಸ್ ಮಾಡಿಲ್ಲ.

ಮೋದಿ ಬಡವರ ಪರ ಮಾತನಾಡ್ತಾರೆ ಅಂದುಕೊಂಡಿದ್ದೆ. ಎಲ್ಲಿದೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್..? ನಾವು ಮನವಿ ಕೊಟ್ಟಿರುವ ಅನುದಾನವನ್ನೇ ಕೇಂದ್ರ ಕೊಟ್ಟಿಲ್ಲ. ಇನ್ನು ಈಗ ಹೇಗೆ ನೆರವನ್ನ ಘೋಷಿಸುತ್ತದೆ. ಅಭಿವೃದ್ಧಿ, ಬರ, ಪ್ರವಾಹದ ಬಗ್ಗೆ ಮಾತುಕತೆಯೇ ಇಲ್ಲ. ಬರೀ ಭಾವನಾತ್ಮಕವಾಗಿ ಜನರನ್ನ ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಪ್ರಧಾನಿಯವರೇ ಸ್ವತಃ ಬಂದು ಪರಿಶೀಲಿಸಬೇಕಿತ್ತು. ಪ್ರವಾಹ ಪರಿಸ್ಥಿತಿಯನ್ನ ಖುದ್ದು ನೋಡಬೇಕಿತ್ತು. ಇಲ್ಲಿಯವರೆಗೆ ಒಂದೇ ಒಂದು ರೂಪಾಯಿ ನೀಡಿಲ್ಲ. ಹೋಗಲಿ ಎಷ್ಟು ನಷ್ಟವಾಗಿದೆ ಎಂಬ ಸರ್ವೆಯನ್ನೇ ಮಾಡಿಸಿಲ್ಲ. ನಷ್ಟದ ಅಂದಾಜಿನ ಬಗ್ಗೆ ವರದಿಯನ್ನೇ ಕೇಂದ್ರಕ್ಕೆ ನೀಡಿಲ್ಲ. ನಿನ್ನೆ ನರೇಂದ್ರ ಮೋದಿಯನ್ನ ಬಿಎಸ್ ವೈ ಭೇಟಿ ಮಾಡಿದ್ದಾರೆ. ಪ್ರಧಾನಿ ಒಂದೇ ಒಂದು ಭರವಸೆ ನೀಡಿಲ್ಲ. ಆದರೂ ಇವರೇ ನೆರವು ಕೊಡ್ತಾರೆ ಅಂತ ಹೇಳಿಕೊಂಡಿದ್ದಾರೆ. ಇನ್ನು ಇವರು ಕೇಂದ್ರಕ್ಕೆ ವರದಿ ನೀಡೋದು ಯಾವಾಗ..? ಕೇಂದ್ರದಿಂದ ಪರಿಹಾರ ಬರುವುದು ಯಾವಾಗ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಸೋಮವಾರದಿಂದ ಪ್ರವಾಸ ಹೋಗ್ತೇನೆ. ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತೇನೆ. ಕೇಂದ್ರ ಸರ್ಕಾರ 5 ಸಾವಿರ ಕೋಟಿ ಬಿಡುಗಡೆ ಮಾಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇನ್ನು ಫೋನ್ ಟ್ಯಾಪಿಂಗ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ಫೋನ್ ಟ್ಯಾಪಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಬಳಿ ಮೊಬೈಲ್ ಇಲ್ಲ, ನಮ್ಮ ಪಿಎಗಳ ಬಳಿ ಇದೆ. ಹಾಗೇನಾದ್ರೂ ಆಗಿದ್ರೆ ತನಿಖೆ ಮಾಡಿಸಲಿ ಎಂದು ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!