ಪ್ರತ್ಯೇಕ ರಾಷ್ಟ್ರ ನಿರ್ಮಾಣಕ್ಕೆ ನಾಗಾಲ್ಯಾಂಡ್ ಆಗ್ರಹ

ಗುವಾಹಟಿ (ಆಗಸ್ಟ್.15); ಇಡೀ ಭಾರತ ಇಂದು ವಿಜೃಂಭನೆಯಿಂದ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ನಾಗಾಲ್ಯಾಂಡ್, ತಮಗೆ ಪ್ರತ್ಯೇಕ ದ್ವಜ, ಸಂವಿಧಾನ ಹಾಗೂ ಸಾರ್ವಭೌಮ ನಾಗಾಲ್ಯಾಂಡ್ ಬೇಕು ಎಂಬ ಆಗ್ರಹವನ್ನು ಕೇಂದ್ರ ಸರ್ಕಾರದ ಮುಂದಿಡುವ ಮೂಲಕ ಒಕ್ಕೂಟ ವ್ಯವಸ್ಥೆಯಲ್ಲಿ ಬಿರುಕು ಮೂಡಿರುವ ಸೂಚನೆ ನೀಡಿದೆ.

ಸಾರ್ವಭೌಮ ನಾಗಾಲ್ಯಾಂಡ್ ಬೇಡಿಕೆ ಎಂಬುದು ಈ ರಾಜ್ಯದ ವ್ಯಾಪ್ತಿಯಲ್ಲಿರುವ ನೆರೆಯ ರಾಜ್ಯಗಳಲ್ಲಿ ವಾಸವಾಗಿರುವ ನಾಗಾ ಜನಾಂಗ ಇರುವ ಪ್ರದೇಶಗಳನ್ನು ಒಳಗೊಂಡಿದೆ ಎಂದು ಅವರು ಈ ಮೂಲಕ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಪಕ್ಷದ ಅಧ್ಯಕ್ಷ ಕ್ಯೂ ಟುಕ್ಕು ಕೇಂದ್ರ ಸರ್ಕಾರದ ಎದುರು ತಮ್ಮ ಆಗ್ರಹವನ್ನು ಮುಂದಿಟ್ಟಿದ್ದಾರೆ.

73 ನೇ ನಾಗಾ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಾಗಾಲ್ಯಾಂಡ್ನ ಕ್ಯಾಂಪ್ ಹೆಬ್ರಾನ್ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ (ಎನ್ಎಸ್ಸಿಎನ್ -ಐಎಂ) ಅಧ್ಯಕ್ಷ ಕ್ಯೂ ಟಕ್ಕು, “ಪ್ರತ್ಯೇಕ ಧ್ವಜ ಹಾಗೂ ಸಂವಿಧಾನದ ಬೇಡಿಕೆಯು ನಾಗಾ ಜನಾಂಗದ ರಾಜಕೀಯ ಹಕ್ಕುಗಳ ತಳಹದಿಯನ್ನು ಆಧರಿಸಿದ್ದು, ಯಾವ ಆಮಿಷಕ್ಕೂ ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಡುವ ಮಾತೆ ಇಲ್ಲ. ನಮ್ಮ ರಾಜಕೀಯ ಸಮಸ್ಯೆಯನ್ನು ಪರಿಹರಿಸಲು ಬೇರೆ ದಾರಿ ಇಲ್ಲ. ಹೀಗಾಗಿ ನಮ್ಮ ಬೇಡಿಕೆಯಾದ ಪ್ರತ್ಯೇಕ ನಾಗಾ ರಾಷ್ಟ್ರೀಯ ದ್ವಜ ಮತ್ತು ಪ್ರತ್ಯೇಕ ಸಂವಿಧಾನವನ್ನು ಕೇಂದ್ರ ಸ್ವೀಕರಿಸಲೇಬೇಕು. ಇಲ್ಲದಿದ್ದರೆ, ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ” ಎಂದು ಅವರ ಎಚ್ಚರಿಕೆ ನೀಡಿದ್ದಾರೆ.

ನಾಗಾ ಜನಾಂಗದ ಹಕ್ಕು ಬಾದ್ಯತೆಗಳ ಕುರಿತು ರಾಷ್ಟ್ರ ಮಟ್ಟದಲ್ಲಿ ತೆಗೆದುಕೊಳ್ಳಲಾಗಿರುವ ನಿರ್ಧಾರವನ್ನು ಜನಾಂಗದ ಎಲ್ಲರಿಗೂ ಮನವರಿಕೆ ಮಾಡಿಕೊಡಲಾಗಿದೆ. ಹೀಗಾಗಿ ಅದರ ಸಾಕಾರಕ್ಕಾಗಿ ನಾವು ಯಾವುದೇ ಹಂತಕ್ಕೆ ಮುಂದುವರೆಯಲು ಸಿದ್ಧ ಹಾಗೂ ನಮ್ಮ ಜನಾಂಗದ ಈ ನಿರ್ಧಾರವನ್ನು ಒಡೆವ ಅಥವಾ ನಾಶಮಾಡಲು ಪ್ರಯತ್ನಿಸುತ್ತಿರುವ ಯಾವುದೇ ವಿಭಜಕ ಶಕ್ತಿಗಳನ್ನು ನಾಗಾ ಜನಾಂಗ ಸ್ವೀಕರಿಸುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

“ನಾಗಾ ಜನಾಂಗದ ರಾಜಕೀಯ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ ಭಾರತ ಸರ್ಕಾರ ಮತ್ತು ಎನ್ಎಸ್ಸಿಎನ್ ನಡುವೆ ಆಗಸ್ಟ್ 3, 2015ರಂದು ‘ಐತಿಹಾಸಿಕ ಚೌಕಟ್ಟು ಒಪ್ಪಂದ’ಕ್ಕೆ (ಫ್ರೇಮ್ ವರ್ಕ್ ಒಪ್ಪಂದ) ಅಧಿಕೃತವಾಗಿ ಸಹಿ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಭಾರತ ಸರ್ಕಾರ ಈ ಒಪ್ಪಂದಕ್ಕೆ ಪೂರಕವಾಗುವ ವಿಶ್ವಾಸವನ್ನು ವ್ಯಕ್ತಪಡಿಸಿತ್ತು. ಆದರೆ, ಇದೀಗ ಈ ಒಪ್ಪಂದವನ್ನು ಮುರಿದಿರುವ ಕೇಂದ್ರ ನಮ್ಮ ರಾಜಕೀಯ ಸಮಸ್ಯೆಯನ್ನು ಪರಿಹರಿಸುವ ಬದಲು ಈ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುವಂತೆ ಮಾಡುತ್ತಿದೆ.

ಈ ಚೌಕಟ್ಟು ಒಪ್ಪಂದವು ಎರಡೂ ಪ್ರಮುಖ ಸಂಸ್ಥೆಗಳ (ಭಾರತ ಮತ್ತು ನಾಗ) ಕೆಲವು ಪ್ರಮುಖ ಬಿಕ್ಕಟ್ಟಿನಿಂದ ವಿಮುಕ್ತವಾಗಿ ಅತ್ಯುತ್ತಮ ರಾಜಕೀಯ ಬುದ್ಧಿವಂತಿಕೆಯ ಮೂಲಕ ಸಂಪನ್ಮೂಲಗಳ ಸಮಾನ ಹಂಚಿಕೆಗೆ ನೆರವಾಗಿತ್ತು. ಅಲ್ಲದೆ ಈ ಭಾಗದ ಗೌರವಾನ್ವಿತ ಬದುಕಿಗೂ, ಶಾಶ್ವತ ಶಾಂತಿಗೂ ಇದು ಏಕೈಕ ಮಾರ್ಗವಾಗಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರದ ನಡೆಯಿಂದ ಪರಸ್ಪರ ಗೌರವದ ಮೂಲಕ ಯಾವುದೇ ಸಮಸ್ಯೆಯನ್ನು ಬಗೆಹರಿಸುವುದು ಅಸಾಧ್ಯ ಎಂಬಂತಹ ವಾತಾವರಣ ನಿರ್ಮಾಣವಾಗಿದೆ” ಎಂದು ಅವರು ಆರೋಪಿಸಿದರು.

“ಸಾಮರಸ್ಯ ಎಂಬುದು ದೈವಿಕವಾದದ್ದು, ಹೀಗಾಗಿ ಎಲ್ಲಾ ಸಮಸ್ಯೆಗಳ ಅಂತಿಮ ಪರಿಹಾರಕ್ಕಾಗಿ ರಾಜ್ಯದ ವಿವಿಧ ಶಿಬಿರಗಳಲ್ಲಿರುವ ನಾಗಾ ಸಹೋದರ ಸಹೊದರಿಯರು ವಿಮಾನದ ಮೂಲಕ ಇಲ್ಲಿಗೆ ಬರಲು ನಾನು ಕರೆ ನೀಡುತ್ತೇನೆ. ನೆರೆಹೊರೆಯವರೊಂದಿಗಿನ ಪ್ರತಿಯೊಂದು ಸಮಸ್ಯೆಯನ್ನು ನಾವು ಪರಸ್ಪರರ ಇತಿಹಾಸವನ್ನು ಗೌರವಿಸುವ ಮೂಲಕ ಪರಿಹರಿಸಿಕೊಳ್ಳೋಣ” ಎಂದು ಕ್ಯೂ ಟುಕ್ಕು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!