ಕಾಶ್ಮೀರದಲ್ಲಿ ಸೂಕ್ಷ್ಮ ಪರಿಸ್ಥಿತಿಯಿದೆ: ಸಹಜಸ್ಥಿತಿಗೆ ಮರಳಲು ಕಾಲಾವಕಾಶ ಬೇಕು- ಸುಪ್ರೀಂ

ನವದೆಹಲಿ(ಆ. 13): ಸಂವಿಧಾನದಿಂದ 370ನೇ ವಿಧಿ ತೆಗೆದುಹಾಕಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಸೂಕ್ಷ್ಮ ಪರಿಸ್ಥಿತಿ ಇದೆ. ಇದು ಸಹಜಸ್ಥಿತಿಗೆ ಮರಳಲು ಸಾಕಷ್ಟು ಸಮಯ ಬೇಕಾಗುತ್ತದೆ. ನಿಷೇಧಾಜ್ಞೆಗಳನ್ನ ತೆರವುಗೊಳಿಸಲು ಸರ್ಕಾರಕ್ಕೆ ಸಮಯಾವಕಾಶದ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ತೆಗೆದುಹಾಕಿದ ಬಳಿಕ ಅಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅನೇಕ ಕಾಶ್ಮೀರಿ ಮುಖಂಡರನ್ನು ಗೃಹ ಬಂಧನದಲ್ಲಿಡಲಾಗಿತ್ತು. ಕಾಶ್ಮೀರದಲ್ಲಿ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ ಎಂದು ವಿಪಕ್ಷಗಳ ಆರೋಪವಾಗಿದೆ. ಕಾಂಗ್ರೆಸ್ನ ಕಾರ್ಯಕರ್ತ ತೆಹಸೀನ್ ಪೂನಾವಾಲಾ ಎಂಬುವರು ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ದೂರು ದಾಖಲಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿದ ನ್ಯಾ| ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಸುಪ್ರೀಂ ನ್ಯಾಯಪೀಠವು, ಜಮ್ಮು-ಕಾಶ್ಮೀರದಲ್ಲಿ ಯಾವುದೇ ಪ್ರಾಣಹಾನಿ ಆಗದೇ ಇರುವುದು ಮುಖ್ಯ. ಹೀಗಾಗಿ, ಸರ್ಕಾರಕ್ಕೆ ಸೂಕ್ತ ಸಮಯಾವಕಾಶ ನೀಡುವುದು ಅಗತ್ಯ ಎಂದು ಹೇಳಿದೆ.

ತಾವು ನಿತ್ಯವೂ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಜಿಲ್ಲಾಡಳಿತಗಳ ಸಲಹೆ ಪಡೆದು ಅಗತ್ಯವಿದ್ದೆಡೆ ನಿಷೇಧಾಜ್ಞೆ ಹಿಂಪಡೆಯುವ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರ ಕೂಡ ನ್ಯಾಯಾಲಯಕ್ಕೆ ತಿಳಿಸಿದೆ.

ಕಾಶ್ಮೀರದಲ್ಲಿ ಸಹಜಸ್ಥಿತಿ ಮರಳಲು 3 ತಿಂಗಳು ಬೇಕಾಗಬಹುದು ಎಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದರು. 2016ರಲ್ಲಿ ಕಾಶ್ಮೀರಿ ಉಗ್ರ ಬುರ್ಹನ್ ವಾನಿ ಹತ್ಯೆಯಾದ ಬಳಿಕ ಕಾಶ್ಮೀರದಲ್ಲಿ ನಡೆದ ಬೃಹತ್ ಪ್ರತಿಭಟನೆಯ ಘಟನೆಯನ್ನು ಉಲ್ಲೇಖಿಸಿದ ಅಟಾರ್ನಿ ಜನರಲ್ ಅವರು ಸರ್ಕಾರಕ್ಕೆ 3 ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!