ಯುಎಇ ಯ ವಿವಿಧ ಎಮಿರೇಟ್ ನಿಂದ ಬಕ್ರೀದ್ ಪ್ರಯುಕ್ತ 460 ಮಂದಿಗೆ ಜೈಲು ಮೋಚನೆ

ದುಬೈ: ಬಕ್ರೀದ್ ಪ್ರಯುಕ್ತ 430 ಕೈದಿಗಳನ್ನು ಬಿಡುಗಡೆ ಮಾಡಲು ಯುಎಇ ಉಪಾಧ್ಯಕ್ಷ, ಪ್ರಧಾನ ಮಂತ್ರಿ, ದುಬೈ ಆಡಳಿತಾಧಿಕಾರಿಯೂ ಆದ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಂ ಆದೇಶ ನೀಡಿದ್ದಾರೆ.

ಬಿಡುಗಡೆಯಾದ ಬಂಧಿತರಿಗೆ ತಮ್ಮ ಕುಟುಂಬಗಳೊಂದಿಗೆ ಒಂದಾಗಲು ಮತ್ತು ಹೊಸ ಜೀವನವನ್ನು ನಡೆಸಲು ಅವಕಾಶವಿದೆ ಎಂದು ದುಬೈ ಮಾಧ್ಯಮ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಖೈದಿಗಳನ್ನು ಬಿಡುಗಡೆ ಮಾಡಲು ಸಾರ್ವಜನಿಕ ಅಭಿಯೋಜನಾ ಇಲಾಖೆ ದುಬೈ ಪೊಲೀಸರೊಂದಿಗೆ ಸೇರಿ ಕ್ರಮ ಕೈಗೊಳ್ಳಲು ಪ್ರಾರಂಭಿಸಿರುವುದಾಗಿ ದುಬೈ ಅಟಾರ್ನಿ ಜನರಲ್ ಎಸ್ಸಾಮ್ ಇಸಾ ಅಲ್ ಹುಮೈದಾನ್ ಹೇಳಿದ್ದಾರೆ.

ಅಜ್ಮಾನ್‌ನ 70 ಕೈದಿಗಳಿಗೆ ವಿಮೋಚನೆ ನೀಡಲಾಗುವುದು ಎಂದು ಅಜ್ಮಾನ್ ಆಡಳಿತಗಾರ ಮತ್ತು ಸುಪ್ರೀಂ ಕೌನ್ಸಿಲ್ ಸದಸ್ಯ ಶೈಖ್ ಹುಮೈದ್ ಬಿನ್ ರಾಶಿದ್ ಅಲ್-ನುಐಮಿ ಆದೇಶಿಸಿದ್ದಾರೆ.

ಶಿಕ್ಷೆಯ ಸಮಯದಲ್ಲಿ ಉತ್ತಮವಾಗಿ ವರ್ತಿಸಿದವರನ್ನು ಬಿಡುಗಡೆ ಮಾಡಲಾಗಿದೆ. ತಪ್ಪಿನಿಂದ ಹೊರಬಂದು ತನ್ನ ಕುಟುಂಬದೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸುವುದು ಆಡಳಿತಗಾರನ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಆರೋಗ್ಯಕರ ಮತ್ತು ಹೆಚ್ಚು ಕ್ರಿಯಾಶೀಲ ರೀತಿಯಲ್ಲಿ ಸಮಾಜಕ್ಕೆ ಮರಳಲು ಈ ಅವಕಾಶವನ್ನು ಜನರು ಬಳಸಿಕೊಳ್ಳಬೇಕೆಂದು ಶೈಖ್ ಹುಮೈದ್ ಜನರನ್ನು ಕೋರಿದ್ದಾರೆ.

ರಾಸ್ ಅಲ್ ಖೈಮಾದ 208 ಬಂಧಿತರನ್ನು ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಯುಎಇ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ರಾಸ್ ಅಲ್ ಖೈಮಾ ಆಡಳಿತಗಾರ ಶೈಖ್ ಸಯೀದ್ ಬಿನ್ ಸಖಾರ್ ಅಲ್-ಖಾಸಿಮಿ, ಪ್ರಿನ್ಸ್ ಮತ್ತು ನ್ಯಾಯಾಂಗ ಮಂಡಳಿ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಸೌದ್ ಬಿನ್ ಸಖರ್ ಅಲ್-ಖಾಸಿಮಿ ಕೂಡ ಕೈದಿಗಳಿಗೆ ಕ್ಷಮೆ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರಕಾರಕ್ಕೆ ಆದೇಶಿಸಿದ್ದಾರೆ.

ಫುಜೈರಾದಲ್ಲಿನ 73 ಖೈದಿಗಳಿಗೆ ವಿಮೋಚನೆ ನೀಡಲು ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಫುಜೈರಾದ ಆಡಳಿತಗಾರ ಶೈಖ್ ಹಮದ್ ಬಿನ್ ಮುಹಮ್ಮದ್ ಅಲ್ ಶರ್ಕಿ ಆದೇಶ ನೀಡಿದ್ದಾರೆ.

ಅದೇ ರೀತಿ ಉಮ್ಮುಲ್ ಖುವೈನ್‌ನ ಸುಪ್ರಿಮ್ ಕೌನ್ಸಿಲ್ ಸದಸ್ಯ, ಆಡಳಿತಾಧಿಕಾರಿ ಶೈಖ್ ಸ‌ಊದ್ ಬಿನ್ ರಾಶಿದ್ ಅಲ್ ಮುಅಲ್ಲಾ ಅವರು ಶಿಕ್ಷೆಯ ಸಮಯದಲ್ಲಿ ಉತ್ತಮವಾಗಿ ವರ್ತಿಸಿದ ಬಂಧಿತರನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಆದರೆ ಎಷ್ಟು ಮಂದಿ ಬಿಡುಗಡೆಯಾಗಲಿದ್ದಾರೆ ಎಂದು ನಿರ್ದಿಷ್ಟಪಡಿಸಲಾಗಿಲ್ಲ.

Leave a Reply

Your email address will not be published. Required fields are marked *

error: Content is protected !!