(ಕರ್)ನಾಟಕ ಸರಕಾರ ಉಳಿಯುತ್ತೋ? ಬೀಳುತ್ತೋ?- ಗುರುವಾರ ಭವಿಷ್ಯ ನಿರ್ಧಾರ

ಬೆಂಗಳೂರು,ಜು.15: ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತಯಾಚನೆಗೆ ಸಮಯ ನಿಗದಿಯಾಗಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ಈ ಪ್ರಕ್ರಿಯೆ ನಡೆಯಲಿದ್ದು, ಸರ್ಕಾರದ ಅಳಿವು ಉಳಿವು ಅಂದೇ ನಿರ್ಧಾರವಾಗಲಿದೆ.

ಮೈತ್ರಿಕೂಟದ ಶಾಸಕರ ಭಿನ್ನಮತೀಯ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸಿಎಂ ಎಚ್ಡಿಕೆ ತಾವು ವಿಶ್ವಾಸ ಮತಯಾಚನೆ ಮಾಡುವುದಾಗಿ ಶುಕ್ರವಾರ ಸದನದಲ್ಲಿ ಘೋಷಿಸಿದ್ದರು. ಇದಕ್ಕೆ ಆರಂಭದಲ್ಲಿ ಬಿಜೆಪಿ ವಿರೋಧಿಸಿತ್ತಾದರೂ, ಸೋಮವಾರ ಸ್ವತಃ ಬಿಜೆಪಿ ನಾಯಕರೇ ಅವಿಶ್ವಾಸ ಮಂಡನೆಗೆ ಸ್ಪೀಕರ್‌ ಬಳಿ ನೋಟಿಸ್‌ ನೀಡಿದರು. ಅದರಂತೆ ಸಿಎಂ ಎಚ್ಡಿಕೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರನ್ನು ಒಳಗೊಂಡ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. ಗುರುವಾರ ಬೆಳಗ್ಗೆ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡಬೇಕು ಎಂದು ಒಂದು ತಾಸಿನ ಈ ಸಭೆಯಲ್ಲಿ ತೀರ್ಮಾನವಾಯಿತು.

ಇಂದೇ (ಸೋಮವಾರ) ವಿಶ್ವಾಸಮತ ಕೋರಬೇಕು ಎಂದು ಬಿಜೆಪಿ ಮೊದಲು ಪಟ್ಟು ಹಿಡಿದಿತ್ತು. ಮೈತ್ರಿ ಕೂಟದ ನಾಯಕರು ಶುಕ್ರವಾರ ನಿಗದಿ ಮಾಡಬೇಕಾಗಿ ಒತ್ತಾಯಿಸಿದರು. ಮಂಗಳವಾರ ಸುಪ್ರೀಂಕೋರ್ಟ್‌ ತೀರ್ಪು ಗಮನಿಸಿದ ನಂತರ ವಿಶ್ವಾಸಮತ ಕೋರುವುದು ಒಳಿತು ಎಂದು ಸ್ಪೀಕರ್ ಅಭಿಪ್ರಾಯಪಟ್ಟರು. ಕೊನೆಗೆ ಗುರುವಾರ ಬೆಳಿಗ್ಗೆ 11ಕ್ಕೆ ವಿಶ್ವಾಸಮತ ಮಂಡಿಸುವ ವಿಚಾರ ಅಂತಿಮವಾಯಿತು ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದರು.‘ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಕೋರುತ್ತೇವೆ. ಗೆಲ್ಲುವ ವಿಶ್ವಾಸ ಇರುವುದರಿಂದಲೇ ನಾವು ವಿಶ್ವಾಸಮತ ಕೋರುತ್ತೇವೆ ಎಂದು ಹೇಳಿದ್ದೇವೆ,’ ಎಂದು ಅವರು ಹೇಳಿದರು.

ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಸ್ಪೀಕರ್ ರಮೇಶ್ ಕುಮಾರ್, ಗುರುವಾರ ವಿಶ್ವಾಸ ಮತ ಯಾಚನೆಗೆ ಒಪ್ಪಿಗೆ ನೀಡಿದ್ದು, ಅಂದು ಮೈತ್ರಿ ಪಕ್ಷದ ಎಲ್ಲಾ ಶಾಸಕರು ಸದನಕ್ಕೆ ಹಾಜರಾಗಲಿದ್ದು, ಯಾರೂ ವಿಪ್ ಉಲ್ಲಂಘಿಸುವುದಿಲ್ಲ. ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ರಾಮಲಿಂಗಾರೆಡ್ಡಿ ಅವರು ಕಟ್ಟಾ ಕಾಂಗ್ರೆಸ್. ಹೀಗಾಗಿ ಅವರು ಪಕ್ಷ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಗುರುವಾರ ನಾವು ವಿಶ್ವಾಸಮತ ಪಡೆಯಲಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!