janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಮುಂಬೈ: ಭಾರತದ ಹಜ್ ಕೋಟಾವನ್ನು ಸೌದಿ ಅರೇಬಿಯಾ ವಿಸ್ತರಿಸಿದ ಹಿನ್ನಲೆಯಲ್ಲಿ ಈ ವರ್ಷ ಭಾರತದಿಂದ 2 ಲಕ್ಷ ಮುಸ್ಲಿಮರು ಹಜ್ ಯಾತ್ರೆಗೆ ತೆರಳಲಿದ್ದು, ಇದು ದಾಖಲೆಯಾಗಿದೆ. ಯಾವುದೇ ಸಬ್ಸಿಡಿಯಿಲ್ಲದೆ ಹಜ್ ಯಾತ್ರೆಗೆ ತೆರಳುತ್ತಿರುವುದು ಇನ್ನೊಂದು ವಿಶೇಷವಾಗಿದೆ ಎಂದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರ ಇಲಾಖೆಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಮುಂಬೈಯ ಹಜ್ ಹೌಸ್‌ನಲ್ಲಿ ನಡೆದ ಖಾಸಗಿ ಪ್ರವಾಸ ಆಯೋಜಕರ ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 500ಕ್ಕೂ ಹೆಚ್ಚು ವಿಮಾನಯಾನಗಳಲ್ಲಿ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. 1.40 ಲಕ್ಷ ಯಾತ್ರಿಕರು ಭಾರತದ ಹಜ್ ಸಮಿತಿಯ ಮೂಲಕ, ಉಳಿದ 60 ಸಾವಿರ ಯಾತ್ರಿಕರು 725 ಖಾಸಗಿ ಪ್ರವಾಸ ಆಯೋಜಕರ ಮೂಲಕ ತೆರಳಲಿದ್ದಾರೆ.

ಎಲ್ಲಾ ಖಾಸಗಿ ಪ್ರವಾಸ ಆಯೋಜಕರು ಹಜ್ ಸಮಿತಿ ನಿಗದಿಗೊಳಿಸಿದ ದರದಲ್ಲಿ ಯಾತ್ರಿಕರನ್ನು ಕರೆದೊಯ್ಯಲಿವೆ. ಈ ನಿಟ್ಟಿನಲ್ಲಿ ಖಾಸಗಿ ಪ್ರವಾಸ ಆಯೋಜಕರ ವೆಬ್‌ಪೋರ್ಟಲ್ http://haj.nic.in/pto/ ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ ಎಂದು ಸಚಿವ ನಖ್ವಿ ತಿಳಿಸಿದ್ದಾರೆ.
ಕೆಲವು ಖಾಸಗಿ ಪ್ರವಾಸ ಆಯೋಜಕರ (ಪಿಟಿಒ)ವಿರುದ್ಧ ಗಂಭೀರ ದೂರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಮೂರು ಪಿಟಿಒಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಕಳೆದ ವರ್ಷವೂ ಹಲವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಪುರುಷ ಜತೆಗಾರನಿಲ್ಲದೆ ಹಜ್ ಯಾತ್ರೆಗೆ ತೆರಳುವ ಮಹಿಳೆಯರ ಸಂಖ್ಯೆ ಈ ವರ್ಷ ಹೆಚ್ಚಿದ್ದು, 2,340ಕ್ಕೆ ತಲುಪಿದೆ. ಭಾರತದಿಂದ ಈ ವರ್ಷ ಹಜ್ ಯಾತ್ರೆಗೆ ತೆರಳುವವರಲ್ಲಿ ಶೇ.48ರಷ್ಟು ಮಹಿಳೆಯರಾಗಿದ್ದಾರೆ. ಭಾರತದ ಹಜ್ ಕೋಟಾವನ್ನು ಸೌದಿ ಅರೇಬಿಯಾ 2 ಲಕ್ಷಕ್ಕೆ ಹೆಚ್ಚಿಸಿದ್ದರಿಂದ ಪ್ರತೀಕ್ಷಾ ಪಟ್ಟಿ(ವೆಯ್ಟಿಂಗ್ ಲಿಸ್ಟ್)ಯಲ್ಲಿರುವವರಿಗೆ ಶೀಘ್ರ ಅವಕಾಶ ದೊರಕಲು ಸಾಧ್ಯವಾಗಿದೆ.

ಕೋಟಾವನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ ಸ್ವಾತಂತ್ರ ದೊರೆತ ಬಳಿಕ ಇದೇ ಪ್ರಥಮ ಬಾರಿಗೆ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಬಿಹಾರದಂತಹ ರಾಜ್ಯಗಳ ಎಲ್ಲಾ ಅರ್ಜಿದಾರರೂ ಹಜ್ ಯಾತ್ರೆಗೆ ತೆರಳಲು ಅವಕಾಶ ಲಭಿಸಿದೆ. ಹಜ್ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡಿರುವುದರಿಂದ, ಸಬ್ಸಿಡಿ ಹಿಂಪಡೆದರೂ ಹಜ್ ಯಾತ್ರಿಕರಿಗೆ ಹೆಚ್ಚಿನ ವೆಚ್ಚವಾಗದು ಎಂದು ಸಚಿವರು ವಿವರಿಸಿದರು.

ಸೌದಿಯಲ್ಲಿನ ಆರೋಗ್ಯ ಸೌಲಭ್ಯ
ಒಟ್ಟು 14 ಆರೋಗ್ಯ ಕೇಂದ್ರಗಳು( ಮಕ್ಕಾದಲ್ಲಿ 11, ಮದೀನಾದಲ್ಲಿ 3), ಮಕ್ಕಾದಲ್ಲಿ 3 ಮತ್ತು ಮದೀನಾದಲ್ಲಿ ಒಂದು ಆಸ್ಪತ್ರೆಗಳನ್ನು ವ್ಯವಸ್ಥೆ ಮಾಡಲಾಗಿದೆ. 620 ಹಜ್ ಸಂಯೋಜಕರು, ಸಹಾಯಕ ಹಜ್ ಅಧಿಕಾರಿಗಳು, ಹಜ್ ಸಹಾಯಕರು, ವೈದ್ಯರು, ವೈದ್ಯ ಸಹಾಯಕರನ್ನು ನೇಮಿಸಲಾಗಿದ್ದು ಇವರಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

error: Content is protected !! Not allowed copy content from janadhvani.com