ಸಾರ್ವಜನಿಕ ಶುಚಿತ್ವ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ

ಖತರ್: ಸಾರ್ವಜನಿಕ ಶುಚಿತ್ವ ಕಾನೂನನ್ನು ಉಲ್ಲಂಘಿಸುವರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖತರ್ ಮುನಿಸಿಪಾಲಿಟಿ ಪರಿಸರ ಸಚಿವಾಲಯ ಎಚ್ಚರಿಕೆ ನೀಡಿದೆ. ಸಂದರ್ಶಕರು ಒಟ್ಟಾಗಿ ತಲುಪುವ ಬೀಚುಗಳು, ದ್ವೀಪಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಸಾರ್ವಜನಿಕ ಶುಚಿತ್ವ ಖಾತೆಯು ತಿಳಿಸಿದೆ.

ಈದುಲ್ ಫಿತರ್ ಪ್ರಯುಕ್ತ ಎರಡು ದಿನಗಳಲ್ಲಿ ಸೀಲೈನ್ ಬೀಚ್ ಮಾಲಿನ್ಯದಿಂದ ಕೂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಲ್ಲಿ ಚಿತ್ರಗಳು ಹರಿದಾಡಿದ್ದವು. ಹಬ್ಬದ ಆಚರಣೆಗಾಗಿ ಹಲವಾರು ಕಾರ್ಮಿಕರು ರಜಾ ದಿನಗಳಲ್ಲಿ ಸದ್ರಿ ಬೀಚ್‌ಗೆ ಬಂದಿದ್ದರು. ಬೀಚ್‌ನಲ್ಲೇ ಉಳಿದು, ಚಾರ್ಕೋಲ್, ಪ್ಲಾಸ್ಟಿಕ್, ಆಹಾರ ವಸ್ತುಗಳು ಮುಂತಾದ ಮಾಲಿನ್ಯಗಳನ್ನು ಕಂಡಲ್ಲಿ ಬಿಸಾಡಿರುವ ಬಗೆಗಿನ ಚಿತ್ರಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಸಚಿವಾಲಯ ಎಚ್ಚರಿಕೆ ನೀಡಿದೆ.

ಮಾಲಿನ್ಯ ನಿಕ್ಷೇಪಿಸಲು 60 ಪುಟ್ಟ ಕಂಟೈನರ್, 15 ದೊಡ್ಡ ಮಟ್ಟದ ಕಂಟೈನರ್‌ಗಳನ್ನು ಸದ್ರಿ ಬೀಚ್‌ನಲ್ಲಿ ಸ್ಥಾಪಿಸಲಾಗಿದ್ದರೂ, ಬೀಚ್ ಮತ್ತು ಪರಿಸರ ಮಾಲಿನ್ಯದಿಂದ ಕೂಡಿದ್ದು, ಅಸಡ್ಡೆಯಿಂದ ಇದು ಸಂಭವಿಸಿದೆ ಎಂದು ಸಂಭಂದಿತ ಖಾತೆಯ ಅಂಡರ್ ಸೆಕ್ರೆಟರಿ ಸಫರ್ ಮುಬಾರಕ್ ಅಲ್ ಶಾಫಿ ಹೇಳಿದ್ದಾರೆ. ಬೀಚ್‌ಗೆ ಬಂದ ಕಾರ್ಮಿಕರಿಗೆ ಸರಿಯಾದ ಮಾಹಿತಿ ನೀಡದೆ ಕಂಪೆನಿಗಳು ತಪ್ಪೆಸಗಿವೆ ಎಂಬುದಾಗಿಯೂ ಸಚಿವರು ತಿಳಿಸಿದರು.

ಬೀಚ್‌ಗೆ ಬರುವ ಕಾರ್ಮಿಕರಿಗೆ ಅವರು ಕೆಲಸ ಮಾಡುವ ಕಂಪೆನಿಗಳು ಮಾಲಿನ್ಯ ನಿಕ್ಷೇಪಣಾ ಕವರ್‌ಗಳನ್ನು ನೀಡಬೇಕು. ಶುಚಿತ್ವ ಕುರಿತು ಹೆಚ್ಚಿನ ಕಾಲಜಿ ವಹಿಸಿ, ಜಾಗೃತಿ ಮೂಡಿಸಬೇಕು ಎಂದಿರುವ ಅಲ್ ಶಾಫಿ, ಶುಚಿತ್ವ ಪಾಲನೆಗಾಗಿ ಸಚಿವಾಲಯದ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.

ಸಾರ್ವಜನಿಕ ಶುಚಿತ್ವವನ್ನು ಕಡೆಗಣಿಸುವವರು ವ್ಯಕ್ತಿಗಳು ಅಥವಾ ಕಂಪೆನಿಯಾದರೂ ಸರಿ ಅವರು ಕಠಿಣ ಕ್ರಮಕ್ಕೆ ಒಳಗಾಗಲಿದ್ದಾರೆ ಎಂದು ಅಲ್ ಶಾಫಿ ಎಚ್ಚರಿಕೆ ನೀಡಿದ್ದು, ಇಂತಹ ತಪ್ಪೆಸಗುವುದು 100ರಿಂದ 500 ರಿಯಾಲ್ ವರೆಗೆ ದಂಡ ಮತ್ತು ಒಂದು ವರ್ಷದ ವರೆಗೆ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧವಾಗಿ ಕಾನೂನು ಪರಿಗಣಿಸಿದೆ.

Leave a Reply

Your email address will not be published. Required fields are marked *

error: Content is protected !!