ನಿಪಾಹ್ ವೈರಸ್‌: ಮಂಗಳೂರಿನಲ್ಲಿ ಕಟ್ಟೆಚ್ಚರ- 8 ಜಿಲ್ಲೆಗಳಲ್ಲಿ ಜಾಗೃತಿ

ಮಂಗಳೂರು ಜೂನ್ 06: ಕೇರಳದಲ್ಲಿ ತೀವ್ರ ಜ್ವರದಿಂದ ಆಸ್ಪತ್ರೆ ಸೇರಿದ್ದ 23 ವರ್ಷದ ವಿದ್ಯಾರ್ಥಿ ದೇಹದಲ್ಲಿ ನಿಪಾಹ್ ವೈರಸ್ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಿಪಾಹ್ ವೈರಸ್ ಭೀತಿ ಕೇರಳದ ಗಡಿಭಾಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಆವರಿಸಿದೆ.

ನಿಪಾಹ್ ವೈರಸ್‌ ಲಕ್ಷಣಗಳು ಕಂಡುಬಂದರೆ ತತ್‌ಕ್ಷಣ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂದು ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ. ಕೇರಳದ ವಿದ್ಯಾರ್ಥಿಯೊಬ್ಬರಲ್ಲಿ ನಿಪಾಹ್ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಗಡಿಯ ದಕ್ಷಿಣ ಕನ್ನಡದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕೇರಳದ ಗಡಿಭಾಗವಾಗಿರುವ ಕಾರಣ ಮಂಗಳೂರಿಗೆ ಪ್ರತಿದಿನ ಸಾವಿರಾರು ಮಂದಿ ಸಂಚರಿಸುತ್ತಿರುತ್ತಾರೆ. ಅಲ್ಲದೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.

ನಿಪಾಹ್ ವೈರಸ್ ಬಗ್ಗೆ ಮಂಗಳೂರಿನ ರೈಲು ನಿಲ್ದಾಣದಲ್ಲಿ ಮುಂಜಾಗ್ರತೆ ವಹಿಸಲಾಗಿದೆ. ಕೇರಳದಿಂದ ಮಂಗಳೂರಿಗೆ ಬಹುತೇಕ ಮಂದಿ ರೈಲಿನಲ್ಲೇ ಆಗಮಿಸುತ್ತಾರೆ. ಹಾಗಾಗಿ ರೈಲ್ವೇ ವೈದ್ಯರು ಈ ಬಗ್ಗೆ ಗಮನ ಹರಿಸುತ್ತಿರಬೇಕು. ಜ್ವರ ಅಥವಾ ಇತರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಬಂದಲ್ಲಿ ಸೂಕ್ತ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.ರಾಜ್ಯದಿಂದ ಕೇರಳಕ್ಕೆ ತೆರಳುವವರು ಮಾಸ್ಕ್ ಧರಿಸಿ ತೆರಳುವಂತೆ ಸೂಚಿಸಲಾಗಿದೆ.

ರಾಜ್ಯದಲ್ಲಿ ನಿಪಾಹ್ ಸೋಂಕು ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟಣೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇರಳದಲ್ಲಿ ನಿಪಾಹ್ ಮರುಕಳಿಸಿರುವ ಹಿನ್ನೆಲೆಯಲ್ಲಿ ಕೇರಳ ಸಂಪರ್ಕಿಸುವ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದೇವೆ.

ಆರೋಗ್ಯ ಇಲಾಖಾ ಕಾರ್ಯದರ್ಶಿಯವರನ್ನು ಮಂಗಳೂರಿಗೆ ನಿಯೋಜನೆ ಮಾಡಲಾಗಿದೆ. ಕೇರಳದ ಆರೋಗ್ಯ ಸಚಿವರ ಜತೆಗೆ ಸಮಾಲೋಚನೆ ನಡೆಸಿದ್ದು, ಸಾರ್ಸ್ ವೈರಾಣು ಬಗ್ಗೆ ಕೇಂದ್ರದ ಸೂಚನೆಗಳು ರಾಜ್ಯಕ್ಕೆ ಬಂದಿವೆ. ಈ ಬಗ್ಗೆಯೂ ಎಚ್ಚರಿಕೆ ವಹಿಸಿದ್ದೇವೆ. ವಾಂತಿ, ಜ್ವರ ಕಾಣಿಸಿಕೊಂಡರೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕದ 8 ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ಮಲೇಶಿಯಾದಲ್ಲಿ ನಿಪಾಹ್ ವೈರಸ್ ಮೊದಲು ಕಂಡುಬಂದಿದ್ದು, 1988ರಿಂದ ಇಲ್ಲಿಯವರೆಗೆ 477 ಮಂದಿಯಲ್ಲಿ ಈ ವೈರಸ್ ಕಾಣಿಸಿಕೊಂಡಿದೆ, 248 ಮಂದಿ ಮೃತಪಟ್ಟಿದ್ದಾರೆ. 2018ರಲ್ಲಿ 18 ಪ್ರಕರಣಗಳ ಪೈಕಿ 17 ಮಂದಿ ಕಲ್ಲಿಕೋಟೆ ಹಾಗೂ ಮಲಪ್ಪುರಂನಲ್ಲಿ ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!