ರಿಯಾದ್: ಸೌದಿ ಅರೇಬಿಯಾದಲ್ಲಿ ಅನಿವಾಸಿಗಳಿಗೆ ಅನುಮತಿಸಲಾಗುವ ಪ್ರಿವಿಲೇಜ್ ಇಖಾಮಾಗಳಿಗೆ ಪಾವತಿಸಬೇಕಾದ ಶುಲ್ಕವನ್ನು ಮಾಧ್ಯಮಗಳು ಬಹಿರಂಗ ಪಡಿಸಿದೆ. ಸ್ಥಿರ ನಿವಾಸ ಅನುಮತಿಯ ಇಖಾಮಾಗೆ ಎಂಟು ಲಕ್ಷ ರಿಯಾಲ್ ಶುಲ್ಕ ಪಾವತಿಸಬೇಕಾಗಿದೆ. ಪ್ರತೀ ವರ್ಷ ನವೀಕರಿಸುವ ಇಖಾಮಾಗೆ ಒಂದು ಲಕ್ಷ ರಿಯಾಲ್ ಪಾವತಿಸಬೇಕಾಗಿದೆ.
ಅರೆಬಿಕ್ ಮಾಧ್ಯಮಗಳು ಬಹಿರಂಗಪಡಿಸಿದ ಮಾಹಿತಿಯನುಸಾರ ಗ್ರೀನ್ ಕಾರ್ಡ್ ರೂಪದಲ್ಲಿರುವ ಇಖಾಮಾಗೆ ಪ್ರಾಯೋಜಕತ್ವದ ಅವಶ್ಯಕತೆ ಇಲ್ಲ.ಇಖಾಮಾ ಕೇಂದ್ರವು ನೇರವಾಗಿ ಇಂತಹ ಇಖಾಮಾವನ್ನು ನೀಡಲಿದೆ.
ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶಗಳ ನಾಗರಿಕರಿಗೆ ಪ್ರಿವಿಲೇಜ್ ಇಖಾಮಾ ದೊರೆಯಲಿದೆ. ಕ್ರಿಮಿನಲ್ ಹಿನ್ನೆಲೆ ಇಲ್ಲದಿರ ಬೇಕು ಎಂಬುದು ನಿಬಂಧನೆಯಾಗಿದೆ. ಆದರೆ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರುವವರಿಗೆ ಮಾತ್ರ ಈ ಇಖಾಮಾವನ್ನು ತನ್ನದಾಗಿಸಲು ಸಾಧ್ಯವಿದೆ. ಸುದೀರ್ಘ ಸಮಯದಿಂದ ಸೌದಿಯಲ್ಲಿ ನೆಲೆಸಿರುವ ಸಾವಿರಾರು ಅರಬ್ ಸಂಪನ್ನರಿಗೆ ಈ ಮೂಲಕ ಅನುಕೂಲವಾಗಲಿದೆ. ಅದರೊಂದಿಗೆ ಕಲಾ- ಸಾಹಿತ್ಯ – ಶಾಸ್ತ್ರ ರಂಗದ ಪ್ರತ್ಯೇಕ ಪ್ರತಿಭೆಗಳನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಅಂತಿಮವಾಗಿ ಆರ್ಥಿಕತೆಯ ಲಾಭಕ್ಕೆ ಸಹಾಯ ನೀಡಬಲ್ಲವರಾದ ಎಲ್ಲರಿಗೂ ಇಖಾಮಾ ದೊರೆಯಲಿದೆ. ಈ ಮೂಲಕ ಬೇನಾಮಿ ವ್ಯವಹಾರ ಕೊನೆಗೊಳ್ಳಲಿದೆ ಎಂಬುದು ಸೌದಿ ಅರೇಬಿಯಾದ ಆಶಯವಾಗಿದೆ.