ನವದೆಹಲಿ: ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ–ಬಾಬರಿ ಮಸೀದಿ ಭೂ ವಿವಾದ ಸಂಬಂಧ ಆಗಸ್ಟ್ 15ರ ಒಳಗೆ ವರದಿ ಸಲ್ಲಿಸುವಂತೆ ಮಧ್ಯಸ್ಥಿಕೆ ಸಮಿತಿಗೆ ಕಾಲಾವಕಾಶ ನೀಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಂವಿಧಾನ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ ರಚಿಸಲಾಗಿರುವ ಮಧ್ಯಸ್ಥಿಕೆ ಸಮಿತಿ ಮುಚ್ಚಿದ ಲಕೋಟೆಯಲ್ಲಿ ಮಧ್ಯಂತರ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿತು.
ಇದೇ ವೇಳೆ ಅಂತಿಮ ವರದಿ ಸಲ್ಲಿಕೆಗೆ ಕಾಲಾವಕಾಶ ನೀಡುವಂತೆ ಮಧ್ಯಸ್ಥಿಕೆ ಸಮಿತಿ ನ್ಯಾಯಪೀಠಕ್ಕೆ ಮನವಿ ಮಾಡಿತು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಪೀಠ, ‘ಅಂತಿಮ ವರದಿ ಸಲ್ಲಿಕೆಗೆ ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದೆ. ಸದ್ಯ ಮಧ್ಯಸ್ಥಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಮಾತುಕತೆ ಸಕಾರಾತ್ಮಕವಾಗಿ ಮುಂದುವರಿಯುತ್ತಿದೆ’ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಂವಿಧಾನ ಪೀಠ, ವಿವಾದವನ್ನು ಸಂಧಾನದ ಮೂಲಕ ಸೌಹಾರ್ದಯುತವಾಗಿ ಬಗೆಹರಿಸುವ ಸಂಬಂಧ ಮಧ್ಯಸ್ಥಿಕೆ ಸಮಿತಿಯನ್ನು ರಚಿಸಿ ಮಾರ್ಚ್ 8ರಂದು ಆದೇಶ ಹೊರಡಿಸಿತ್ತು.
ಸಂಧಾನಕ್ಕಾಗಿ ಗುಪ್ತಸಭೆಯನ್ನು ನಡೆಸಬೇಕು. ಎಂಟು ವಾರದ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಿ, ವರದಿ ಸಲ್ಲಿಸುವಂತೆಯೂ ಆದೇಶಿಸಲಾಗಿತ್ತು.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ. ಕಲೀಫುಲ್ಲಾ ಸಮಿತಿ ಮುಖ್ಯಸ್ಥರಾಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಂಚು ಸಮಿತಿಯಲ್ಲಿದ್ದಾರೆ.