ದುಬೈ: ಯುಎಇಯಲ್ಲಿ ಕಾರ್ಮಿಕರನ್ನು ಕೊಂಡೊಯ್ಯುವ ಬಸ್‌ಗಳಲ್ಲಿ ಹೆಚ್ಚಿನ ಸೌಕರ್ಯಗಳನ್ನು ಒದಗಿಸುವಂತೆ ನಿರ್ದೇಶಿಸಲಾಗಿದೆ. ವೈ.ಫೈ, ಎ.ಸಿ. ಮುಂತಾದವುಗಳನ್ನು ಖಚಿತಪಡಿಸಬೇಕೆಂದು ಮಾನವ ಸಂಪನ್ಮೂಲ ಸಚಿವಾಲಯ ಆದೇಶ ನೀಡಿದೆ. ಈ ಆದೇಶವನ್ನು ಪಾಲಿಸದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಯುಎಇಯ ಮಾನವ ಸಂಪನ್ಮೂಲ ಖಾತೆಯ ಸಚಿವಾಲಯದ ಹೊಸ ಆದೇಶ ಪ್ರಕಾರ ಕಾರ್ಮಿಕರನ್ನು ಕೊಂಡೊಯ್ಯುವ ಬಸ್‌ಗಳಲ್ಲಿ ಅವಶ್ಯವಾದ ಸೌಕರ್ಯಗಳನ್ನು ಖಚಿತಪಡಿಸಬೇಕು. ತಂಪು ಪಾನೀಯ ಲಭಿಸುವ ರೆಫ್ರಿಜರೇಟರ್, ತುರ್ತು ಚಿಕಿತ್ಸಾ ಸಾಮಗ್ರಿ, ಅತ್ಯಾಧುನಿಕ ಸುರಕ್ಷಾ ಯಂತ್ರೋಪಕರಣಗಳು ಮುಂತಾದವು ಬಸ್‌ನಲ್ಲಿ ಇರಬೇಕು. ಉದ್ಯೋಗದಾತ ಈ ಆದೇಶವನ್ನು ಪಾಲಿಸುವಂತೆ ಸಚಿವಾಲಯ ನಿರ್ದೇಶಿಸಿದೆ.
ಬಸ್‌ಗಳಲ್ಲಿ ಪರಿಶೀಲನೆ ನಡೆಸಿ, ನಿಬಂಧನೆಗಳನ್ನು ಪಾಲಿಸುವ ಬಗ್ಗೆ ಖಚಿತ ಪಡಿಸಲಾಗುವುದು ಎಂದು ಗೃಹ ಸಚಿವಾಲಯದ ಮೆಕಾನಿಕ್ಸ್ ಡ್ರೈವರ್ಸ್ ಲೈಸೆಂಸಿಂಗ್ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ಜನರಲ್ ಅಲಿ ಮುಹಮ್ಮದ್ ಅಲ್ ಶಂಸಿ ಹೇಳಿದ್ದಾರೆ. ಬಸ್‌ಗಳಿಗೆ ಏಕೀಕೃತ ಬಣ್ಣಗಳನ್ನು ಜಾರಿಗೆ ತರಲಾಗುವುದು. ಲೋಗೊ, ಕಂಪನಿಯು ಹೆಸರು, ವೇಗ ನಿಯಂತ್ರಣ ಸ್ಟಿಕ್ಕರ್, ದೂರುಗಳಿದ್ದಲ್ಲಿ ಕಂಪನಿಯನ್ನು ಸಂಪರ್ಕಿಸಬೇಕಾದ ವಿವರಗಳು ಮುಂತಾದವುಗಳನ್ನು ಬಸ್‌ಗಳಲ್ಲಿ ಅಂಟಿಸುವಂತೆ ಅದೇಶದಲ್ಲಿ ವ್ಯಕ್ತಪಡಿಸಲಾಗಿದೆ.