janadhvani

Kannada Online News Paper

ರಂಝಾನ್ ಪ್ರಯುಕ್ತ 3005 ಖೈದಿಗಳಿಗೆ ಮೋಚನೆ- ಶೈಖ್ ಖಲೀಫಾ ಆದೇಶ

ಅಬುಧಾಬಿ: ರಮಝಾನ್ ಪ್ರಯುಕ್ತ ಸಾವಿರಾರು ಖೈದಿಗಳಿಗೆ ಜೈಲು ಮುಕ್ತಿ ನೀಡಲು ಯುಎಇ ತೀರ್ಮಾನ ಕೈಗೊಂಡಿದೆ. ಅಧ್ಯಕ್ಷ ಶೈಖ್ ಖಲೀಫ ಮತ್ತು ಶಾರ್ಜಾ, ರಾಸಲ್ ಖೈಮಾ, ಉಮ್ಮುಲ್ ಖುವೈನ್‌ಗಳ ಆಡಳಿತಾಧಿಕಾರಿಗಳು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

ವಿವಿಧ ಜೈಲುಗಳಲ್ಲಿ ಹಲವಾರು ಪ್ರಕರಣ ಗಳಿಗೆ ಸಂಬಂಧಪಟ್ಟಂತೆ ಬಂಧಿತರಾದ 3005 ಖೈದಿಗಳಿಗೆ ಮೋಚನೆ ನೀಡಲು ಮತ್ತು ಅವರನ್ನು ಆರ್ಥಿಕ ಬಾಧ್ಯತೆಗಳಿಂದ ಮುಕ್ತಗೊಳಿಸಲು ಅಧ್ಯಕ್ಷ ಶೈಖ್ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್ ಆದೇಶ ನೀಡಿದ್ದಾರೆ. ಜೀವನದ ಪ್ರತ್ಯೇಕ ಸನ್ನಿವೇಶದಲ್ಲಿ ತಪ್ಪೆಸಗಿದವರಿಗೆ ತಪ್ಪುಗಳನ್ನು ತಿದ್ದಲು ಮತ್ತು ಹೊಸ ಜೀವನ ಆರಂಭಿಸಿ ಕುಟುಂಬದವರೊಂದಿಗೆ ಸಂತೋಷವಾಗಿರಲು ಅವಕಾಶ ನೀಡುವ ಸಲುವಾಗಿ ಶೈಖ್ ಖಲೀಫಾ ಈ ತೀರ್ಮಾನ ಕೈಗೊಂಡಿದ್ದಾರೆ.

ಶಾರ್ಜಾ ಜೈಲಲ್ಲಿರುವ 377 ಖೈದಿಗಳಿಗೆ ವಿಮೋಚನೆ ನೀಡಲು ಅಲ್ಲಿನ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಶಾರ್ಜಾ ಆಡಳಿತಾಧಿಕಾರಿ ಶೈಖ್ ಡಾ.ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಆದೇಶಿಸಿದ್ದಾರೆ.

ಭಾರತೀಯರನ್ನೊಳಗೊಂಡ ಖೈದಿಗಳಿಗೆ ಮುಕ್ತಿ ದೊರೆಯಲಿದ್ದು, ಖೈದಿಗಳಾಗಿದ್ದ ಸಂದರ್ಭದಲ್ಲಿ ಅವರ ಗುಣನಡತೆಯನ್ನು ಪರಿಗಣಿಸಿ ಬಿಡುಗಡೆಗೊಳಿಸಲಾಗುತ್ತದೆ. ಬಂಧನ ಕಾಲದಲ್ಲಿನ ಮಾನಸಿಕ ಬದಲಾವಣೆಯಿಂದಾಗಿ ಶಿಷ್ಟ ಕಾಲ ಕುಟುಂಬದವರೊಂದಿಗೆ ಸಾಧಾರಣ ಜೀವನ ನಡೆಸುವ ಅವಕಾಶ ದೊರಕಲಿದೆ ಎಂದು ಶಾರ್ಜಾ ಪೊಲೀಸ್ ಕಮಾಂಡರ್ ಇನ್ ಚೀಫ್ ಸೈಫ್ ಮುಹಮ್ಮದ್ ಅಲ್ ಸ‌ಅರಿ ಅಲ್ ಶಂಸಿ ಆಶಾವಾದ ವ್ಯಕ್ತಪಡಿಸಿದ್ದಾರೆ.

ರಾಸಲ್ ಖೈಮಾದ ಜೈಲಿನಿಂದ 306 ಖೈದಿಗಳಿಗೆ ಮುಕ್ತಿ ದೊರಕಲಿದ್ದು, ಅಲ್ಲಿನ ಸುಪ್ರೀಂ ಕೌನ್ಸಿಲ್ ಸದಸ್ಯ, ರಾಸಲ್ ಖೈಮಾ ಆಡಳಿತಾಧಿಕಾರಿಯೂ ಆದ ಶೈಖ್ ಸವೂದ್ ಬಿನ್ ಸಖರ್ ಅಲ್ ಖಾಸಿಮಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಉಮ್ಮುಲ್ ಖುವೈನ್‌ನ ಜೈಲಿನಿಂದ ಕೆಲವು ಬಂಧಿಗಳಿಗೆ ವಿಮೋಚನೆ ನೀಡುವಂತೆ ಸುಪ್ರೀಂ ಕೌನ್ಸಿಲ್ ಸದಸ್ಯ, ಉಮ್ಮುಲ್ ಖುವೈನ್ ಆಡಳಿತಾಧಿಕಾರಿ ಶೈಖ್ ಸವೂದ್ ಬಿನ್ ರಾಶಿದ್ ಅಲ್ ಮುಅಲ್ಲ ಆದೇಶಿಸಿದ್ದಾರೆ. ಈ ಪ್ರಕ್ರಿಯೆಯನ್ನು ಸುಲಭಗೊಳಿಸಲಿದ್ದು, ರಮಝಾನ್ ಪ್ರಥಮ ಹಂತದಲ್ಲೇ ಕುಟುಂಬದವರೊಂದಿಗೆ ಸೇರುವ ಅವಕಾಶ ದೊರೆಯಲಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com