janadhvani

Kannada Online News Paper

ರಫೇಲ್ ಹಗರಣ: ಸುಪ್ರೀಂಕೋರ್ಟ್ ಮರು ವಿಚಾರಣೆಗೆ ಕೇಂದ್ರ ಸರ್ಕಾರ ಆಕ್ಷೇಪ

ಈ ವರದಿಯ ಧ್ವನಿಯನ್ನು ಆಲಿಸಿ


ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶನಿವಾರ ಸುಪ್ರೀಂ ಕೋರ್ಟ್ ಗೆ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದು, ಈಗಾಗಲೇ ಸರ್ವೋಚ್ಛ ನ್ಯಾಯಾಲಯ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿರುವುದರಿಂದ, ಸೋರಿಕೆಯಾದ, ಕಾಣೆಯಾದ ದಾಖಲೆಗಳ ಆಧಾರದಲ್ಲಿ ಮರು ವಿಚಾರಣೆಯ ಅಗತ್ಯವಿಲ್ಲ ಎಂದು ಹೇಳಿದೆ.

ಭದ್ರತಾ ವಿಚಾರಗಳ ಮೇಲಿನ ಸಂಪುಟ ಸಮಿತಿ ರಕ್ಷಣಾ ಸ್ವಾಧೀನ ಮಂಡಳಿ ಇದರ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿದೆ ಎಂದು ಸರ್ಕಾರ ಇಂದು ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿದೆ .

ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಹಾಗೂ ಇತರರು ಪ್ರಕರಣದ ಮರು ವಿಚಾರಣೆಗೆ ಮನವಿ ಮಾಡಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ, ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಸಾರ್ವಭೌಮದ ನಿರ್ಧಾರವನ್ನು ಪ್ರಶ್ನಿಸುವ ಅರ್ಜಿದಾರರ ಕ್ರಮ ಸರಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ದೇಶದ ಪ್ರಧಾನಿ ಕಚೇರಿ, ಉಭಯ ಸರ್ಕಾರಗಳ ನಡುವಿನ ಒಪ್ಪಂದ ಮೇಲ್ವಿಚಾರಣೆ ಮಾಡುವುದರಬಗ್ಗೆ ಬೇರೆಯವರು ಮಧ್ಯಪ್ರವೇಶ ಅಥವಾ ಪರ್ಯಾಯ ಸಮಾಲೋಚನೆ ನಡೆಸುವುದಕ್ಕೆ ಅವಕಾಶವಿಲ್ಲ ಎಂದು ಸರ್ಕಾರ ಪ್ರಮಾಣ ಪತ್ರದಲ್ಲಿ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಮೇ 6 ರಂದು ರಫೇಲ್ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

error: Content is protected !! Not allowed copy content from janadhvani.com