janadhvani

Kannada Online News Paper

ಶಾಂತಿಯನ್ನು ಕಾಪಾಡುವ ಒಮಾನ್ ಸರಕಾರದ ಪ್ರಯತ್ನಗಳು ಪ್ರಶಂಸನೀಯ- ಇಂಡಿಯನ್ ಗ್ರಾಂಡ್ ಮುಫ್ತಿ

ಈ ವರದಿಯ ಧ್ವನಿಯನ್ನು ಆಲಿಸಿ


ಮಸ್ಕತ್: ಒಮಾನ್ ಸರಕಾರವು ಶಾಂತಿ ಮತ್ತು ಸಮಾಧಾನವನ್ನು ಕಾಪಾಡುವ ನಿಟ್ಟಿನಲ್ಲಿ ನಡೆಸುವ ಪ್ರಯತ್ನಗಳು ಪ್ರಶಂಸನೀಯವಾಗಿದೆ ಎಂದು ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.ಅವರು ಒಮಾನ್‌ಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದು, ಪ್ರಾಚೀನ ಕಾಲದಿಂದಲೇ ಭಾರತದೊಂದಿಗೆ ಒಮಾನ್‌ಗೆ ಮಹತ್ತರವಾದ ಸಂಬಂಧವಿತ್ತು. ದಕ್ಷಿಣ ಭಾರತದಲ್ಲಿನ ಪ್ರಥಮ ಮುಸಲ್ಮಾನನಾಗಿ ಗುರುತಿಸಲ್ಪಡುವ ಕೇರಳದಲ್ಲಿ ಆಡಳಿತ ನಡೆಸುತ್ತಿದ್ದ ಚೇರಮಾನ್ ಪೆರುಮಾಳ್ ರಾಜರ ಖಬರ್ (ಗೋರಿ)ಯು ಒಮಾನ್‌ನ ಸಲಾಲಾದಲ್ಲಿದೆ ಎಂಬುದೇ ಇದಕ್ಕೆ ಬಲವಾದ ಉದಾಹರಣೆ ಎಂದವರು ಹೇಳಿದರು.

ಒಮಾನ್ ಆಡಳಿತಾಧಿಕಾರಿ ಸುಲ್ತಾನ್ ಖಾಬೂಸ್ ಬಿನ್ ಸ‌ಈದ್ ಭಾರೀ ದೀರ್ಘ ದೃಷ್ಟಿಯವರಾಗಿದ್ದು, ಜನರ ನಡುವೆ ಸಂಬಂದವನ್ನು ಬೆಸದವರಾಗಿದ್ದಾರೆ. ಅವರು ದೇಶದ ಅಭಿವೃದ್ಧಿಗಾಗಿ ಸ್ವೀಕರಿಸಿದ ನಿಲುವು ಅನುಕರಣೀಯವಾಗಿದೆ ಎಂದ ಎ.ಪಿ.ಉಸ್ತಾದ್, ಸಾವಿರಾರು ಭಾರತೀಯರು ಒಮಾನಿನ ವಿವಿಧ ಭಾಗಗಳಲ್ಲಿ ದುಡಿಯುತ್ತಿದ್ದಾರೆ. ಅವರು ಒಮಾನ್ ‌ನ ಪ್ರಗತಿಗಾಗಿ ನೀಡಿದ ಕೊಡುಗೆ ಕೂಡ ಅನನ್ಯವಾಗಿದೆ ಎಂದರು.

ಶ್ರೀಲಂಕಾದಲ್ಲಿ ಕ್ರೈಸ್ತರು ಮತ್ತು ವಿದೇಶೀಯರನ್ನು ಗುರಿಯಾಗಿಸಿ, ನಡೆದ ಆತ್ಮಹತ್ಯಾ ಬಾಂಬ್ ದಾಳಿಯು ಅತ್ಯಂತ ದುಃಖಕರ ಘಟನೆಯಾಗಿದ್ದು, ಕಠೋರವೂ ಆಗಿದೆ. ಇಂತಹ ನೀಚರಿಗೆ ಇಸ್ಲಾಮ್ ಅಥವಾ ಇನ್ಯಾವುದೇ ಧರ್ಮದೊಂದಿಗೆ ಸಂಬಂಧವಿಲ್ಲ. ಎಲ್ಲಿ ಇಸ್ಲಾಮೀ ಸಂಸ್ಕೃತಿ ಅಚ್ಚ ಹಸಿರಾಗಿ ನೆಲೆ ನಿಂತಿದೆಯೋ ಅಲ್ಲಿ ವಿಶಾಲವಾದ ಸ್ನೇಹ ಮತ್ತು ಸಹೋದರತೆ ನೆಲೆನಿಂತಿರುವುದು ಕಾಣಬಹುದಾಗಿದೆ. ಒಮಾನ್ ಸರಕಾರ ಕೂಡ ಈ ದಿಸೆಯಲ್ಲಿ ಮುನ್ನೆಡೆಯಲ್ಲಿದೆ ಎಂದು ಗ್ರಾಂಡ್ ಮುಫ್ತಿ ಹೇಳಿದರು.

error: Content is protected !! Not allowed copy content from janadhvani.com