ನವದೆಹಲಿ(ಏ. 29): ಮತದಾರರ ಮೇಲೆ ಒತ್ತಡ ಹಾಕಲು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಹೊಸ ವಿಧಾನವೊಂದನ್ನು ಹುಡುಕಿರುವಂತಿದೆ. ಇವಿಎಂ ಮೆಷಿನ್ಗಳಲ್ಲಿನ ಟಿಎಂಸಿ ಪಕ್ಷದ ಗುರುತಿನ ಪಕ್ಕದ ಬಟನ್ ಮೇಲೆ ಸುಗಂಧ ದ್ರವ್ಯ ಎರಚಿ, ಆ ಮೂಲಕ ಮತದಾರರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆನಂದ್ ಬಜಾರ್ ಪತ್ರಿಕಾದಲ್ಲಿ ವರದಿಯೊಂದು ಪ್ರಕಟವಾಗಿದೆ.
ಪಶ್ಚಿಮ ಬಂಗಾಳದ ಬೋಲಪುರ್ ಮತ್ತು ಬೀರ್ಭುಮ್ ಕ್ಷೇತ್ರಗಳಲ್ಲಿ ಇಂಥ ಸೆಂಟ್ ತಂತ್ರಗಳನ್ನು ಟಿಎಂಸಿ ಬಳಸುತ್ತಿದೆ ಎನ್ನಲಾಗಿದೆ.
ಮತದಾರರು ಮತ ಚಲಾಯಿಸುವಾಗ ಬಟನ್ ಒತ್ತಬೇಕಾಗುತ್ತದೆ. ಆಗ ಟಿಎಂಸಿ ಗುರುತಿನ ಮುಂದಿರುವ ಬಟನ್ ಒತ್ತಿದರೆ ಮಾತ್ರ ಅವರ ಬೆರಳಿಗೆ ಪರಿಮಳ ತಾಕುತ್ತದೆ. ಆ ಮತದಾರ ಹೊರಗೆ ಬಂದಾಗ ಬೂತ್ ಸಮೀಪ ಇರುವ ಕಾರ್ಯಕರ್ತರು ಅವರ ಬೆರಳನ್ನು ಮೂಸಿ ಸೆಂಟ್ ಇದೆಯಾ ಎಂದು ಪರೀಕ್ಷಿಸುತ್ತಾರೆ.
ಹಾಗೆಯೆ, ವೋಟ್ ಹಾಕಲು ಹೋಗುವ ಮುನ್ನ ಮತದಾರನಿಗೆ ಇದೇ ವಿಚಾರ ಮುಂದಿಟ್ಟು ಬೆದರಿಕೆಯನ್ನೂ ಅವರು ಹಾಕುತ್ತಿದ್ಧಾರೆ. ನೀವು ಟಿಎಂಸಿಗೆ ವೋಟ್ ಹಾಕಿದರೆ ನಿಮ್ಮ ಬೆರಳಿನಲ್ಲಿ ಸುಗಂಧ ವಾಸನೆ ಉಳಿಯುತ್ತದೆ. ಇಲ್ಲವಾದರೆ ನೀವು ಟಿಎಂಸಿಗೆ ಮತ ಹಾಕಿಲ್ಲವೆಂದಾಗುತ್ತದೆ ಎಂದು ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.