janadhvani

Kannada Online News Paper

ಮೈಸೂರು: ಚಿಕೂನ್ ಗುನ್ಯಾ ಸೋಂಕಿತರ ಸಂಖ್ಯೆ ಹೆಚ್ಚಳ

ಮೈಸೂರು, ಏ.28: ಕೆಂಡಕಾರುತ್ತಿರುವ ಬಿಸಿಲು ಮೈಸೂರಿಗರಿಗೆ ತಲೆನೋವು ತಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಚಿಕೂನ್ ಗುನ್ಯ ಜ್ವರ ಹರಡುತ್ತಿದ್ದು, ಕಳೆದ 4 ತಿಂಗಳಿನಿಂದ 6 ಮಂದಿಗೆ ಚಿಕುನ್‍ ಗುನ್ಯಾ ರೋಗವಿರುವುದು ದೃಢಪಟ್ಟಿದೆ. ಜನವರಿಯಿಂದ ಇದುವರೆಗಿನ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಡೆಂಗ್ಯೂ ಹಾಗೂ ಮಲೇರಿಯಾ ಜ್ವರದ ಪ್ರಕರಣಗಳು ಎಲ್ಲಿಯೂ ವರದಿಯಾಗಿಲ್ಲ. ಈ ಅಂಕಿ-ಅಂಶವನ್ನು ಮೈಸೂರು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ನೀಡಿದ್ದು, ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಈ ಮೂರು ರೋಗಗಳ ಬಗ್ಗೆಯೂ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ.
ಡೆಂಗ್ಯೂ ಮತ್ತು ಚಿಕೂನ್ ಗುನ್ಯ ಜ್ವರ ಸೋಂಕು ಹೊಂದಿದ ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚುವಿಕೆಯಿಂದ ಬರಲಿದ್ದು, ಜೊತೆಗೆ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ.

ಜಿಲ್ಲೆಯಲ್ಲಿ 2012ರಿಂದ ಈವರೆಗೆ ಐವರು ಡೆಂಗ್ಯೂಗೆ ಬಲಿಯಾಗಿದ್ದಾರೆ. 2013ರಲ್ಲಿ 334 ಪ್ರಕರಣಗಳು ಪತ್ತೆಯಾಗಿ ಮೂವರು ಹಾಗೂ 2017ರಲ್ಲಿ 843 ಪ್ರಕರಣಗಳು ಪತ್ತೆಯಾಗಿ ಇಬ್ಬರು ಸೇರಿದಂತೆ ಒಟ್ಟು ಐವರು ಈ ಜ್ವರದಿಂದ ಪ್ರಾಣ ಕಳೆದುಕೊಂಡಿದ್ದರು.
2012 ರಲ್ಲಿ 15, 2014ರಲ್ಲಿ 65, 2015ರಲ್ಲಿ 382, 2016ರಲ್ಲಿ 582, 2018ರಲ್ಲಿ 49 ಪ್ರಕರಣಗಳು ದಾಖಲಾಗಿದ್ದವು. 2019ರಿಂದ ಏ.24ರವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. 2019ರ ಜನವರಿಯಿಂದ ಏಪ್ರಿಲ್ 24ರವರೆಗೆ 6 ಚಿಕುನ್‍ ಗುನ್ಯಾ ಪ್ರಕರಣಗಳು ದಾಖಲಾಗಿವೆ.
ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ
ಇದೀಗ ಮಳೆ ಆರಂಭವಾಗಿರುವುದರಿಂದ ಪ್ರಕರಣಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ನೀರು ನಿಲ್ಲದಂತೆ ನೋಡಿಕೊಳ್ಳಬೇಕು
ಡೆಂಗ್ಯೂ ಜ್ವರಕ್ಕೆ ಕಾರಣವಾಗಿರುವ ಸೊಳ್ಳೆ ಉತ್ಪಾದನೆಗೆ ಅವಕಾಶ ನೀಡದಂತೆ ಮನೆಗಳ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ತುಂಬಾ ದಿನ ನೀರು ಶೇಖರಿಸಿಟ್ಟಿಕೊಳ್ಳಬಾರದು. ಮನೆ ಮನೆ ಭೇಟಿ ನೀಡಿ ಲಾರ್ವ ನಾಶ ಪಡಿಸುವುದೂ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.
ಯಾವುದೇ ಸಾವು ಸಂಭವಿಸಿಲ್ಲ
ಮೈಸೂರಿನಲ್ಲಿ 2012ರಲ್ಲಿ 72 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದು, 2017ರಿಂದ 2019ರ ಏಪ್ರಿಲ್ 24ರವರೆಗೆ ಈ ಸಂಬಂಧ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. 2012ರಿಂದ ಈವರೆಗೂ ಮಲೇರಿಯಾದಿಂದ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿ.
ಮಲೇರಿಯಾ ಮುಕ್ತವಾಗಿಸುವುದೇ ಗುರಿ
ಮಲೇರಿಯಾ ಸೋಂಕು ಕೂಡ ತಗುಲದಂತೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯಚಟುವಟಿಕೆ ನಡೆಸುತ್ತಿದ್ದು, 2020ಕ್ಕೆ ಮೈಸೂರು ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯಾಗಿಸುವ ಗುರಿ ಹೊಂದಲಾಗಿದೆ.

error: Content is protected !! Not allowed copy content from janadhvani.com