janadhvani

Kannada Online News Paper

ಅನುಮತಿ ಪಡೆಯದೆ ಚುನಾವಣಾ ರ‍್ಯಾಲಿ: ಗೌತಮ್‌ ಗಂಭೀರ್‌ ವಿರುದ್ಧ ಎಫ್‌ಐಆರ್‌

ನವದೆಹಲಿ: ಅನುಮತಿ ಪಡೆಯದೆ ಚುನಾವಣಾ ರ‍್ಯಾಲಿ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರಕರಣ ಸಂಬಂಧ ಗಂಭೀರ್‌ ವಿರುದ್ಧ ದೂರು ದಾಖಲಿಸುವಂತೆ ಚುನಾವಣಾ ಆಯೋಗ ಪೂರ್ವ ದೆಹಲಿಯ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಕ್ರಿಕೆಟ್‌ ರಂಗದಲ್ಲಿ ಹೆಸರು ಮಾಡಿದ್ದ ಗೌತಮ್‌ ಗಂಭೀರ್‌ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಸದ್ಯ ಪೂರ್ವ ದೆಹಲಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

‘ಎರಡು ಕಡೆ ಗುರುತಿನ ಚೀಟಿ’
ಗಂಭೀರ್‌, ಕರೋಲ್‌ ಬಾಗ್‌ ಹಾಗೂ ರಾಜಿಂದರ್‌ ನಗರದಲ್ಲಿ ಎರಡು ಕಡೆ ಮತದಾನದ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅತಿಶಿ ಅವರು ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

‘ನಿಮಗೆ ನಿಯಮಗಳೇ ಗೊತ್ತಿಲ್ಲವೆ’
ಎಫ್ಐಆರ್‌ ದಾಖಲಾದ ಬಳಿಕ ಅತಿಶಿ ಮತ್ತೊಂದು ಟ್ವೀಟ್ ಮಾಡಿದ್ದು, ‘ಮೊದಲು ನಾಮಪತ್ರ ಸಲ್ಲಿಸುವುದರಲ್ಲಿ ಎಡವಿದ್ದೀರಿ, ನಂತರ ಎರಡು ಕಡೆ ಮತದಾನದ ಗುರುತಿನ ಚೀಟಿ ಹೊಂದುವ ಮೂಲಕ ಕ್ರಿಮಿನಲ್ ಅಪರಾಧ ಮಾಡಿದ್ದೀರಿ, ಈಗ ರ‍್ಯಾಲಿ ನಡೆಸಲು ಅನುಮತಿ ಪಡೆಯದೆ ಎಫ್ಐಆರ್ ದಾಖಲಾಗಿದೆ. ನಿಮಗೆ ನಿಯಮಗಳೇ ಗೊತ್ತಿಲ್ಲದಿರುವಾಗ ಯಾಕೆ ಆಟ ಆಡುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

error: Content is protected !! Not allowed copy content from janadhvani.com