janadhvani

Kannada Online News Paper

ನಾವು ಭರವಸೆಗಳನ್ನು ಈಡೇರಿಸುವ ವಚನ ಪಾಲಕರು, ವಚನ ಭ್ರಷ್ಟರಲ್ಲ-ಸಿದ್ದರಾಮಯ್ಯ

ಈ ವರದಿಯ ಧ್ವನಿಯನ್ನು ಆಲಿಸಿ

ಬೆಂಗಳೂರು: ಸರ್ವಜನಾಂಗದ ಶಾಂತಿಯ ತೋಟವಾಗಿ ಸಮಾಜವನ್ನು ಕಟ್ಟಬೇಕು ಎಂಬುದರ ಮೇಲೆ ನಂಬಿಕೆ ಇಟ್ಟಿದ್ದೇವೆ. ನಾವು  ಸಮಾಜವನ್ನು ಒಡೆಯುವವರಲ್ಲ, ಕಟ್ಟುವವರು. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷ ಅಭಿವೃದ್ಧಿ, ಸುರಕ್ಷತೆ ಮತ್ತು ಸೌಹಾರ್ದತೆಯ ಮಂತ್ರದಿಂದ ಭಾರತವನ್ನು ಕಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

ಇಂದು ರಾಜ್ಯದಲ್ಲಿ ಲೋಕಸಭೆಯ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಮತದಾನ ಎನ್ನುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ ಮಾಡುವ ನಮ್ಮ ಕರ್ತವ್ಯದ ಭಾಗ. ಎಲ್ಲರೂ ಈ ಕರ್ತವ್ಯವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದೆ ಮತದಾನ ಮಾಡಬೇಕೆಂದು ಮಾಜಿ ಸಿಎಂ ಟ್ವೀಟ್ ಮಾಡಿದ್ದಾರೆ.

ಮೊದಲು ಕಳೆದ ಚುನಾವಣೆಯ ಕಾಲದಲ್ಲಿ ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳು  ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದ್ದಾರೆಯೇ ಎನ್ನುವುದನ್ನುತಾವೆಲ್ಲ ಕುಳಿತು ಯೋಚನೆ  ಮಾಡಬೇಕು. ಚುನಾವಣಾ ಕಾಲದಲ್ಲಿ ಪ್ರಮುಖವಾಗಿ ಪಕ್ಷ ಮತ್ತು ಅಭ್ಯರ್ಥಿಗಳ ವಚನಪಾಲನೆಯ ಚರ್ಚೆ ನಡೆಯಬೇಕೇ ಹೊರತು ಜಾತಿ, ಧರ್ಮ ಇಲ್ಲವೇ ಇತರ ಭಾವನಾತ್ಮಕ ವಿಷಯಗಳ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ.ತಾವು ಮುಖ್ಯಮಂತ್ರಿಯಾಗುವ ಮೊದಲು ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷ 165 ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿತ್ತು. ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವುದು ನನ್ನ ರಾಜಕೀಯ ಧರ್ಮ ಎಂದು ತಿಳಿದುಕೊಂಡು ಆ ಎಲ್ಲ  ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ವಚನ ಪಾಲಕರು, ವಚನ ಭ್ರಷ್ಟರಲ್ಲ ಎಂದು ತಿಳಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ನೀಡಿತ್ತು. ಅವುಗಳನ್ನು ಆ ಪಕ್ಷ ಈಡೇರಿಸಲು ವಿಫಲವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡಿದ್ದಾರೆ.ದೇಶದಲ್ಲಿ ಇಂದು ನಿರಾಶದಾಯಕ, ಅಷ್ಟೇ ಆತಂಕಕಾರಿಯಾದ ವಾತಾವರಣ ಇದೆ. ಉದ್ಯೋಗ ಇಲ್ಲದೆ ಯುವಜನರು, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ದಿವಾಳಿಯಾಗಿರುವ ರೈತರು, ನೋಟು  ರದ್ದತಿ, ಕಿರುಕುಳಕರವಾದ ಜಿಎಸ್‌ಟಿಯಿಂದಾಗಿ ಸಣ್ಣ-ಮಧ್ಯಮ ವರ್ಗದ ವ್ಯಾಪಾರಿಗಳು ಕಷ್ಟಕ್ಕೆ ಸಿಲುಕಿದ್ದಾರೆ.ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರು ಸುರಕ್ಷತೆ ಇಲ್ಲದೆ ಭಯಭೀತರಾಗಿದ್ದಾರೆ.  ಹೀಗೆ ಸಮಾಜದ ಬಹುಭಾಗ ತೀವ್ರವಾದ ಕಷ್ಟ-ನಷ್ಟದಲ್ಲಿದೆ ಮತ್ತು ಅನ್ಯಾಯಕ್ಕೊಳಗಾಗಿದೆ. ಅನ್ಯಾಯಕ್ಕೀಡಾದವರಿಗೆ ನ್ಯಾಯ ಕೊಡುವ ಭರವಸೆಯೊಂದಿಗೆ ನಮ್ಮ ಪಕ್ಷ ನಿಮ್ಮೆದುರು  ಮತಯಾಚನೆಗಾಗಿ ಬೊಗಸೆಯೊಡ್ಡಿ ನಿಂತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರತಿ ಬಡಕುಟುಂಬದ ಮಹಿಳೆಯ ಖಾತೆಗೆ ಪ್ರತಿ ವರ್ಷ 72,000 ರೂಪಾಯಿ ಜಮೆ, ಕೇಂದ್ರ  ಸರ್ಕಾರದ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ, ಪ್ರತಿ ವರ್ಷ ಕೃಷಿ  ಬಜೆಟ್, ಋಣಮುಕ್ತ ರೈತ, ಸರಳ ಮತ್ತು ಜನಹಿತದ ಜಿಎಸ್‌ಟಿ ಇವು ನಮ್ಮ ಪ್ರಮುಖ ಘೋಷಣೆಗಳಾಗಿವೆ. ಮಾತ್ರವಲ್ಲ ಎಲ್ಲ ಮಕ್ಕಳಿಗೆ 1ರಿಂದ 12ನೇ ತರಗತಿ ವರೆಗೆ ಉಚಿತ ಶಿಕ್ಷಣ, ನರೇಗಾದಲ್ಲಿ ಕೆಲಸದ ದಿನಗಳನ್ನು 100ರಿಂದ 150ಕ್ಕೆ ಏರಿಕೆ, ಯುವಜನರಿಗೆ ಉದ್ಯೋಗ, ಭಯ ಮುಕ್ತ ಭಾರತ.  ಇವುಗಳು ನಮ್ಮ ಪ್ರಮುಖ ಭರವಸೆಗಳು. ಇವುಗಳಲ್ಲಿ ಒಂದನ್ನೂ ತಪ್ಪದೆ ಎಲ್ಲವನ್ನೂ ಈಡೇರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.ಮುಂದಿನ ಲೋಕಸಭೆಯಲ್ಲಿ ನಿಮ್ಮನ್ನು ಪ್ರತಿನಿಧಿಸಲು ಪ್ರತಿಯೊಂದು ಕ್ಷೇತ್ರಕ್ಕೂ ದಕ್ಷ,  ಯೋಗ್ಯ ಪ್ರಾಮಾಣಿಕ  ಹಾಗೂ ಜನಾನುರಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಇವರು  ನಿಮಗೆ ನಿಷ್ಠರಾಗಿರುತ್ತಾರೆ, ತಮ್ಮ ಕರ್ತವ್ಯಕ್ಕೆ ಬದ್ಧರಾಗಿರುತ್ತಾರೆ, ನಿಮ್ಮ ಹಿತಾಸಕ್ತಿಯ ರಕ್ಷಕರಾಗಿರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

error: Content is protected !! Not allowed copy content from janadhvani.com