ಮಸೀದಿಯಲ್ಲಿ ಸ್ತ್ರೀ ಪ್ರವೇಶಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ

ನವದೆಹಲಿ: ಪುಣೆ ಮೂಲದ ದಂಪತಿಗಳು ಮುಸ್ಲಿಂ ಮಹಿಳೆಯರಿಗೆ ಮಸೀದಿಯೊಳಗೆ  ಪ್ರವೇಶಿಸಲು ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸಲು ಅನುಮತಿ  ಕೇಳಿದ ನಂತರ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಮಹಿಳಾ ಆಯೋಗ, ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಗೆ ನೋಟಿಸ್ ಜಾರಿ ಮಾಡಿದೆ. 

ಯಾಸ್ಮಿನ್ ಝುಬೇರ್ ಅಹ್ಮದ್  ಪೀರ್ಝಾಡೆ ಮತ್ತು ಝುಬೇರ್ ನಝೀರ್ ಅಹ್ಮದ್  ಪೀರ್ಝಾಡೆ  ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠವು  ದಂಪತಿಗಳು ಸಲ್ಲಿಸಿರುವ ಸಾರ್ವಜನಿಕ  ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದೆ.

ಮಹಿಳೆಯರಿಗೆ ಮಸೀದಿ ಪ್ರವೇಶ ನಿಷೇಧವು ಮಹಿಳೆಯ ಮೂಲಭೂತ ಹಕ್ಕಿನ ಉಲ್ಲಂಘನೆ, ಈ ಕಾರಣದಿಂದಾಗಿ  ಮಹಿಳೆಯರಿಗೆ ಪುರುಷರಂತೆಯೇ ಮಸೀದಿಗೆ  ಪ್ರವೇಶಿಸಲು ,  ಪ್ರಾರ್ಥನೆ ಸಲ್ಲಿಸಲು ಅವಕಾಶ ಒದಗಿಸಬೇಕು ಎಂದು ಯಾಸ್ಮಿನ್ ಝುಬೇರ್ ಅಹ್ಮದ್  ಪೀರ್ಝಾಡೆ ಮತ್ತು ಝುಬೇರ್ ನಝೀರ್ ಅಹ್ಮದ್  ಪೀರ್ಝಾಡೆ  ಸುಪ್ರೀಂ ಗೆ  ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದರು.ಮಹಿಳೆಗೆ ಪ್ರವೇಶವನ್ನು ನಿಷೇಧಿಸುವ ಕ್ರಮವು ನಿರರ್ಥಕ ಮತ್ತು ಅಸಂವಿಧಾನಿಕ ಇಂತಹ  ನಿಯಮಗಳು ವ್ಯಕ್ತಿಯ ಮೂಲಭೂತ ಹಕ್ಕುಗಳಾದ ವಿಧಿ 14, 15, 21 ಮತ್ತು 25 ನ್ನು ಉಲ್ಲಂಘಿಸಿವೆ ಎಂದು ಅವರು ವಾದಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್.ಎ. ಬ್ಬಾಬ್ಡೆ ಮತ್ತು ಎಸ್.ಅಬ್ದುಲ್ ನಝೀರ್ ಅವರ ಪೀಠವು ಕಲಂ14 ರ ರಕ್ಷಣೆಗೆ ಎಲ್ಲರಿಗೂ ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸುತ್ತದೆಯೇ ಎಂದು ತಿಳಿದುಕೊಳ್ಳಲು ಬಯಸಿದೆ. ಮಸೀದಿ, ದೇವಸ್ಥಾನ ಅಥವಾ ಚರ್ಚ್ ಅನ್ನು ರಾಜ್ಯದ ಅಡಿಯಲ್ಲಿ ಪರಿಗಣಿಸುವುದಾದಲ್ಲಿ ಕಲಂ 14 ರ ಪ್ರಕಾರ ಸರ್ಕಾರದ ಕ್ರಮ ಏನೆಂದು ಸುಪ್ರೀಂ ಕೋರ್ಟ್ ಕೇಳಿದೆ.

ಅರ್ಜಿದಾರರಿಗೆ ಕೌನ್ಸಿಲ್ ನೀಡಿರುವ ಉತ್ತರ ತೃಪ್ತಿಕರವಾಗಿಲ್ಲ ಎಂದು ಪೀಠ ಹೇಳಿರುವುದಲ್ಲದೆ,ಈಗ ವಿಚಾರಣೆಯನ್ನು ಕೈಗೊಳ್ಳಲು ಪ್ರಮುಖ ಕಾರಣ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಎಂದು ಪೀಠ ಅಭಿಪ್ರಾಯಪಟ್ಟಿದೆ. ಶಬರಿಮಲೆ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಉದಾಹರಿಸುತ್ತಾ, “ಮಹಿಳೆಯರಿಗೆ ಆರಾಧನೆ  ಹಕ್ಕುಗಳನ್ನು ನಿರಾಕರಿಸಲು  ಧರ್ಮವನ್ನು ಮಾರ್ಗವನ್ನಾಗಿ ಬಳಸಬಾರದು” ಎಂದು ನ್ಯಾಯಾಲಯ ಹೇಳಿದೆ, ಸೌದಿ ಅರೇಬಿಯಾ, ಯುಎಇ, ಈಜಿಪ್ಟ್, ಸಿಂಗಾಪುರ್.ಯುಎಸ್, ಯುಕೆಗಳಲ್ಲಿ ಮಸೀದಿಗಳಲ್ಲಿ ಮಹಿಳೆಯರಿಗೆ ಅನುಮತಿ ನೀಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!