ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದರು.

ಮಾರ್ಚ್‌ 1ರಿಂದ 18ರವರೆಗೆ ಪರೀಕ್ಷೆ ನಡೆದಿತ್ತು. 6.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,16,587 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ61.73ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಮಾಣ ಶೇ 2.17 ಜಾಸ್ತಿ ಆಗಿದೆ. ಬಾಲಕಿಯರು ಶೇ 68.24 ಮತ್ತು ಬಾಲಕರು ಶೇ 55.29ರ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ.

ಉಡುಪಿ ಜಿಲ್ಲೆ ಶೇ 92.20 ತೇರ್ಗಡೆಯ ಪ್ರಮಾಣದೊಂದಿಗೆ ಮೊದಲ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಶೇ90.91 ತೇರ್ಗಡೆ ಪ್ರಮಾಣದೊಂದಿಗೆ ದ್ವಿತೀಯ, ಕೊಡಗು ಶೇ 83.31 ತೇರ್ಗಡೆ ಪ್ರಮಾಣದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದೆ. ಚಿತ್ರದುರ್ಗ ಶೇ51.42ರಷ್ಟು ಫಲಿತಾಂಶ ಪಡೆದಿದ್ದು ಕೊನೆಯ ಸ್ಥಾನ ಪಡೆದಿದೆ.

ರಾಜ್ಯದ 15 ಸರ್ಕಾರಿ ಕಾಲೇಜು ಸೇರಿ 80 ಕಾಲೇಜುಗಳು ಶೇ100 ಫಲಿತಾಂಶ ಪಡೆದಿವೆ. 3 ಸರ್ಕಾರಿ ಕಾಲೇಜು ಸೇರಿ 94 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ಒಟ್ಟು 54,823 ಮಂದಿ ಉನ್ನತ ಶ್ರೇಣಿ (ಡಿಸ್ಟಿಂಕ್ಷನ್), 2,27,301 ಮಂದಿ ಪ್ರಥಮ ದರ್ಜೆ, 80,357 ಮಂದಿ ದ್ವಿತೀಯ ದರ್ಜೆ, 52,106 ಮಂದಿ ಶೇ 50ಕ್ಕಿಂತ ಕಡಿಮೆ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶವನ್ನು ಇಂದು (ಏ.15– ಸೋಮವಾರ) ಮಧ್ಯಾಹ್ನ 12ಕ್ಕೆ ಪದವಿ ಪೂರ್ಣ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ www.pue.kar.nic.in ಮತ್ತು www.karresults.nic.in ರಲ್ಲಿ ಲಭ್ಯವಾಗಲಿದೆ. ಜೀವಶಾಸ್ತ್ರದ (ಬಯಾಲಜಿ) ಪ್ರಶ್ನಪತ್ರಿಕೆ ಕಷ್ಟವಿತ್ತು ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಈ ಹಿನ್ನೆಲೆಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಫಲಿತಾಂಶ ಮತ್ತು ಗಳಿಸಿದ ಅಂಕ ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದ್ದರು.

ಮಧ್ಯಾಹ್ನ 12 ಕ್ಕೆ ಇಲಾಖೆ ವೆಬ್‌ಸೈಟ್‌www.pue.kar.nic.in ಮತ್ತು www.karresults.nic.in ರಲ್ಲಿ ಫಲಿತಾಂಶವನ್ನು ಅಪ್‌ಲೋಡ್‌ ಮಾಡಲಾಗುವುದು ಎಂದು ಇಲಾಖೆಯ ನಿರ್ದೇಶಕಿ ಶಿಖಾ ತಿಳಿಸಿದ್ದಾರೆ. ನಾಳೆ (ಮಂಗಳವಾರ) ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

Leave a Reply

Your email address will not be published. Required fields are marked *

error: Content is protected !!