ಇವಿಎಂ ದೋಷ- ಚುನಾವಣಾ ಆಯುಕ್ತರನ್ನು ಭೇಟಿ ಮಾಡಲಿರುವ ಚಂದ್ರಬಾಬು ನಾಯ್ಡು

ಅಮರಾವತಿ.ಏ.12. ಆಂಧ್ರದಲ್ಲಿ ಗುರುವಾರ ಏಕಕಾಲದಲ್ಲಿ ನಡೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ವೇಳೆ ಮತಯಂತ್ರಗಳಲ್ಲಿ ಕಂಡು ಬಂದ ದೋಷಗಳ ಕುರಿತಂತೆ ಪ್ರಶ್ನಿಸಲು ಮುಖ್ಯಮಂತ್ರಿ ಎನ್‍.ಚಂದ್ರಬಾಬು ನಾಯ್ಡು ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಸಂಸದರು ಶನಿವಾರ ಮುಖ್ಯ ಚುನಾವಣಾ ಆಯುಕ್ತ ಸುನೀಲ್‍ ಅರೋರ ಅವರನ್ನು ಭೇಟಿ ಮಾಡಲಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಂದ್ರಬಾಬು ನಾಯ್ಡು, ಮತಯಂತ್ರಗಳ ನಿರ್ವಹಣೆಗೆ ಎಲ್ಲೆಲ್ಲಿ ತಂತ್ರಜ್ಞರನ್ನು ನೇಮಿಸಲಾಗಿತ್ತು ಎಂಬ ಕುರಿತು ಮುಖ್ಯಚುನಾವಣಾ ಆಯುಕ್ತರನ್ನು ಪ್ರಶ್ನಿಸಲಾಗುವುದು. ಯಾವುದೇ ತಪ್ಪುಗಳು ಹಾಗೂ ದೋಷಗಳು ಇರದಂತೆ ಸಮರ್ಪಕವಾಗಿ ಚುನಾವಣೆಯನ್ನು ನಡೆಸಲು ವಿಫಲವಾಗಿರುವ ಚುನಾವಣಾ ಆಯೋಗದ ವಿರುದ್ಧ ಅಗತ್ಯ ಬಿದ್ದಲ್ಲಿ ಧರಣಿ ನಡೆಸಲಾಗುವುದು. ಅನೇಕ ಕಡೆ ವಿದ್ಯುನ್ಮಾನ ಮತಯಂತ್ರಗಳು ಸರಿಯಾಗಿ ಕೆಲಸ ಮಾಡದೆ, ಮತದಾರರು, ಬಿಸಿಲಿನ ಝಳದ ಮಧ್ಯೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು ಎಂದು ಹೇಳಿದ್ದಾರೆ.

ಸರ್ಕಾರದೊಂದಿಗೆ ಸಮಾಲೋಚಿಸದೆ ಮುಖ್ಯ ಕಾರ್ಯದರ್ಶಿ, ಐಪಿಎಸ್‍ ಅಧಿಕಾರಿಗಳನ್ನು ವರ್ಗ ಮಾಡಿರುವ ಕುರಿತು ಚುನಾವಣಾ ಆಯೋಗವನ್ನು ಪ್ರಶ್ನಿಸಲಾಗುವುದು. ಚುನಾವಣೆ ನಡೆಯುವ ಕೇವಲ 24 ತಾಸು ಮುನ್ನ ಐಪಿಎಸ್‍ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಆ ಅಧಿಕಾರಿ ಯಾವ ತಪ್ಪು ಮಾಡಿದ್ದಾರೆಂದು ಆಯೋಗ ಹೇಳಿಲ್ಲ ಎಂದು ನಾಯ್ಡು ದೂರಿದ್ದಾರೆ.

ಮತ ಖಾತ್ರಿ ಪಡಿಸುವ ವಿವಿಪ್ಯಾಟ್‍ ಯಂತ್ರಗಳ ಚೀಟಿಗಳನ್ನೂ ಎಣಿಕೆ ಮಾಡುವ ಕುರಿತು ಸುಪ್ರೀಂಕೋರ್ಟ್ ನಲ್ಲಿ ಮನವಿ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮತದಾನ ಮಾಡಲು, ಬೆಂಗಳೂರು, ಚೆನ್ನೈ, ಪುಣೆ ಸೇರಿದಂತೆ ದೂರದ ಪ್ರದೇಶಗಳಿಂದ ಜನರು ಆಂಧ್ರಪ್ರದೇಶಕ್ಕೆ ಬಂದಿದ್ದರು. ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟಿದ್ದರಿಂದ ನಿರಾಶೆಗೊಂಡಿದ್ದಾರೆ. ಆರಂಭದಲ್ಲಿ ಶೇ.35ರಷ್ಟು ಮತಯಂತ್ರಗಳು ಕಾರ್ಯ ನಿರ್ವಹಿಸಿಯೇ ಇಲ್ಲ. ಈ ಹಿನ್ನೆಲೆಯಲ್ಲಿ ‘ಭಾರತ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ’ ಆಂದೋಲನವನ್ನು ಟಿಡಿಪಿ ಆರಂಭಿಸಲಿದೆ ಎಂದು ನಾಯ್ಡು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!