janadhvani

Kannada Online News Paper

ಮುಸ್ಲಿಮರು ಹಾಗೂ ಕ್ರಿಶ್ಚಿಯನ್‌ರು ದೇಶಕ್ಕೆ ನಿಷ್ಠರಾಗಿಲ್ಲ- ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಬಾಗಲಕೋಟೆ, ಎ.9: ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ಮುಖಂಡರಲ್ಲೋರ್ವರಾದ ಕೆ.ಎಸ್.ಈಶ್ವರಪ್ಪ, ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ಹಾಗೂ ಕ್ರಿಶ್ಚಿಯನ್‌ರಿಗೆ ಕೋಟಾದಡಿ ಟಿಕೆಟ್ ಹಂಚಿಕೆ ಆಗಕೂಡದು. ದೇಶಕ್ಕೆ ನಿಷ್ಠರಾಗಿರುವವರಿಗೆ ಮಾತ್ರ ಟಿಕೆಟ್ ನೀಡಬೇಕೆಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ನಿಷ್ಠರಾಗಿಲ್ಲದ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದರೆ ದೇಶದ ಕತೆ ಏನು. ಹೀಗಾಗಿಯೆ ಬಿಜೆಪಿ ಕೋಟಾದಡಿ ಯಾರಿಗೂ ಟಿಕೆಟ್ ನೀಡಲು ಮುಂದಾಗಿಲ್ಲವೆಂದು ಸ್ಪಷ್ಟಪಡಿಸಿದರು.

ವೀರಶೈವ-ಲಿಂಗಾಯತ ಎಂದು ಜಾತಿ-ಧರ್ಮ ಹೆಸರಿನಲ್ಲಿ ವಿಭಾಗ ಮಾಡಲು ಹೋದ ಕಾಂಗ್ರೆಸ್‌ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಹೀಗಾಗಿಯೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಹೆಚ್ಚಿನ ಮಾನ್ಯತೆ ಕೊಡಬಾರದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಪ್ರಧಾಜಿ ಎಚ್.ಡಿ.ದೇವೇಗೌಡರು ಗಡಿಯಲ್ಲಿ ಯೋಧರ ಹುತಾತ್ಮರಾದರೆ, ಹಳ್ಳಿಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರೆ ಕಣ್ಣೀರು ಹಾಕುವುದಿಲ್ಲ. ಆದರೆ, ತನ್ನ ಮಕ್ಕಳ ಹಾಗೂ ಮೊಮ್ಮಕ್ಕಳ ಚುನಾವಣಾ ಪ್ರಚಾರದ ರ‍್ಯಾಲಿಗಳಲ್ಲಿ ಮಾತ್ರ ತಪ್ಪದೆ ಕಣ್ಣೀರು ಹಾಕುತ್ತಾರೆ ಎಂದು ಲೇವಡಿ ಮಾಡಿದರು.

error: Content is protected !! Not allowed copy content from janadhvani.com