ವಯನಾಡ್ (ಕೇರಳ): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬೃಹತ್ ರೋಡ್ ಶೋ ವೇಳೆ ಗಾಯಗೊಂಡ ಪತ್ರಕರ್ತರನ್ನು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಉಪಚರಿಸಿ, ಕಾರ್ಯಕ್ರಮದ ಸ್ಥಳದಿಂದ ಆ್ಯಂಬುಲೆನ್ಸ್ವರೆಗೂ ತಾವೇ ಸ್ವತಃ ಕರೆತರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರಾಹುಲ್ ಗಾಂಧಿ ಅವರು ಇಂದು ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆ ಬಳಿಕ ವಯನಾಡ್ನಲ್ಲಿ ಬೃಹತ್ ರೋಡ್ ಶೋ ಆಯೋಜಿಸಿದ್ದರು. ಈ ಎಲ್ಲ ಕಾರ್ಯಕ್ರಮಗಳನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರಲ್ಲಿ ಮೂವರು ಗಾಯಗೊಂಡು ಕುಸಿದುಬಿದ್ದರು. ಇದನ್ನು ನೋಡಿದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸ್ವತಃ ತಾವೇ ವಾಹನದಿಂದ ಕೆಳಗೆ ಇಳಿದು, ಗಾಯಗೊಂಡ ಪತ್ರಕರ್ತರನ್ನು ಸ್ಟ್ರಚ್ಚರ್ ಮೇಲೆ ಮಲಗಿಸಿ, ಆ್ಯಂಬುಲೆನ್ಸ್ವರೆಗೂ ಕರೆತಂದರು. ನಂತರ ಗಾಯಾಳು ಪತ್ರಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ವಯನಾಡಿನಲ್ಲಿ ನಾಮಪತ್ರ ಸಲ್ಲಿಕೆಗಾಗಿ ರಾಹುಲ್ ಗಾಂಧಿ ತಮ್ಮ ತಂಗಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಹೆಲಿಕಾಪ್ಟರ್ನಲ್ಲಿ ಇಂದು ಬೆಳಗ್ಗೆ ಕೇರಳಕ್ಕೆ ಆಗಮಿಸಿದ್ದರು. ನಾಮಪತ್ರ ಸಲ್ಲಿಸಿದ ಬಳಿಕ ಸಾವಿರಾರು ಮಂದಿ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿದರು.