janadhvani

Kannada Online News Paper

‘ಮೋದಿಯ ನಿಜವಾದ ಸರ್ಜಿಕಲ್ ಸ್ಟ್ರೈಕ್‌’ ಐಟಿ ದಾಳಿಗೆ ಸಿಎಂ ಲೇವಡಿ

ಬೆಂಗಳೂರು: ‘ಇದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ನಿಜವಾದ ಸರ್ಜಿಕಲ್ ಸ್ಟ್ರೈಕ್‌. ಆದರೆ ಇದನ್ನು ಆದಾಯ ತೆರಿಗೆ ಇಲಾಖೆ ಮಾಡಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

‘ಐಟಿ ಅಧಿಕಾರಿ ಬಾಲಕೃಷ್ಣ ಅವರಿಗೆ ನೀಡಿರುವ ಸಂವಿಧಾನಾತ್ಮಕ ಹುದ್ದೆಯು ಪ್ರಧಾನಿಯ ದ್ವೇಷ ರಾಜಕಾರಣಕ್ಕೆ ದಾಳವಾಗಿದೆ. ಸರ್ಕಾರಿ ಆಡಳಿತ ಯಂತ್ರ, ಭ್ರಷ್ಟ ಅಧಿಕಾರಿಗಳನ್ನು ಪ್ರತಿಪಕ್ಷಗಳ ವಿರುದ್ಧ ಬಳಸುವ ಪ್ರಯತ್ನ ಖಂಡನೀಯ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ವಿವಿಧೆಡೆ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಬುಧವಾರ ಮಧ್ಯರಾತ್ರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾರೆ. ಹಲವು ಉದ್ಯಮಿಗಳ ಮನೆಗಳನ್ನು ಕೇಂದ್ರೀಕರಿಸಿ ದಾಳಿ ನಡೆಸಿದ ಐಟಿ ಇಲಾಖೆ ಅಧಿಕಾರಿಗಳು, ಗುರುವಾರ ಮುಂಜಾನೆಯವರೆಗೂ ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದರು.

ಜಯನಗರ ಸೌತ್ ಎಂಡ್ ಸರ್ಕಲ್ ಬಳಿ ಇರುವ ಜೋಳ ಮತ್ತು ಪಾಪ್‌ಕಾರ್ನ್ ವ್ಯಾಪಾರ ಮಾಡುವ ಉದ್ಯಮಿ ಸಿದ್ದಿಕ್ ಶೇಠ್ ಮನೆಗೆ ನಾಲ್ಕು ವಾಹನಗಳಲ್ಲಿ ಬಂದಿದ್ದ ಐಟಿ ಅಧಿಕಾರಿಗಳು ವಹಿವಾಟು ದಾಖಲೆ ಪರಿಶೀಲಿಸಿದರು.
ನಗರದ ಎಚ್‌ಎಸ್ಆರ್ ಲೇಔಟ್, ಜಯನಗರ, ಬಸವನಗುಡಿ, ಸೌತ್ ಎಂಡ್ ಸರ್ಕಲ್ ಸೇರಿದಂತೆ ಹಲವೆಡೆ ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿ ತೆರಿಗೆ ವಂಚನೆ ಕುರಿತು ಪರಿಶೀಲಿಸುತ್ತಿದ್ದಾರೆ.

ಐಟಿ ದಾಳಿ ರಾಜಕೀಯ ಪ್ರೇರಿತ: ಡಿಸಿಎಂ ಡಾ.ಜಿ. ಪರಮೇಶ್ವರ

ಸಿಎಂ ಆಪ್ತರ ಮನೆಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ಇಂದು ಸಚಿವ ಪುಟ್ಟರಾಜು ಅವರ ಮನೆ ಮೇಲೆ ದಾಳಿ ನಡೆದಿದ್ದು, ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಸದಾಶಿವನಗರ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈಗ ಲೋಕಸಭಾ ಚುನಾವಣೆ ವೇಳೆ ಕೂಡ ದಾಳಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಅವರು ದಾಳಿ  ಮಾಡುವ ಸ್ವಾತಂತ್ರ್ಯವಿದೆ. ಆದರೆ, ಬಿಜೆಪಿ ನಾಯಕರ ಮನೆ ಮೇಲೆ ಯಾಕೆ ದಾಳಿಯಾಗುವುದಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಐಟಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಜನರ ಗಮನಕ್ಕೆ ತರಲಾಗುತ್ತದೆ. ಕೇಂದ್ರ ಸರ್ಕಾರ ಎಷ್ಟೇ ದಾಳಿ ಅಸ್ತ್ರ ಬಿಟ್ಟರು ಅದಕ್ಕೆ ನಾವು ಭಯ ಪಡುವುದಿಲ್ಲ. ಜನರು ನಮ್ಮ ಜೊತೆ ಇದ್ದಾರೆ ಎಂದರು. ದಾಳಿ ಇನ್ನಷ್ಟು ಹೆಚ್ಚಿದರೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.

error: Content is protected !! Not allowed copy content from janadhvani.com