janadhvani

Kannada Online News Paper

ಮೈತ್ರಿ ಮುಖಂಡರ ಮೇಲೆ ಐಟಿ ದಾಳಿಗೆ ಕೇಂದ್ರ ಸರಕಾರ ಸಂಚು- ಸಿಎಂ

ಮಂಡ್ಯ: ‘ಜೆಡಿಎಸ್‌, ಕಾಂಗ್ರೆಸ್‌ ಮುಖಂಡರ ಮನೆ, ಕಚೇರಿಗಳ ಮೇಲೆ ಗುರುವಾರ ಐಟಿ ಅಧಿಕಾರಿಗಳು ದಾಳಿ ನಡೆಯುವ ಸಾಧ್ಯತೆ ಇದೆ. ಅದಕ್ಕಾಗಿ 300 ಮಂದಿ ಅಧಿಕಾರಿಗಳು ಸಿದ್ಧರಾಗಿದ್ದು ಸಿಆರ್‌ಪಿಎಫ್‌ ಯೋಧರೊಂದಿಗೆ ದಾಳಿ ನಡೆಯಲಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನನಗೆ ಆತ್ಮೀಯರಾಗಿರುವ ಬಿಜೆಪಿ ಮುಖಂಡರೊಬ್ಬರು ಕರೆ ಮಾಡಿ ವಿಷಯ ತಿಳಿಸಿದರು. ಆದಾಯ ತೆರಿಗೆ ಇಲಾಖೆ ದೆಹಲಿ ಉಸ್ತುವಾರಿ ನೋಡಿಕೊಳ್ಳುವ ಬಾಲಕೃಷ್ಣ ಎಂಬ ಅಧಿಕಾರಿ ದಾಳಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ಸಿಬ್ಬಂದಿಯನ್ನು ಕರೆದೊಯ್ಯಲು 300 ಕ್ಯಾಬ್‌ಗಳು ಸಿದ್ಧಗೊಂಡಿವೆ. ಐಟಿ ದಾಳಿಯಲ್ಲಿ ರಾಜ್ಯದ ಪೊಲೀಸ್‌ ಇಲಾಖೆ ನೆರವು ಪಡೆಯಬೇಕು. ಅದನ್ನು ಬಿಟ್ಟು ಸಿಆರ್‌ಪಿಎಫ್‌ ಯೋಧರನ್ನು ಬಳಸಿಕೊಂಡು ದಾಳಿ ನಡೆಸುವ ಯೋಜನೆ ರೂಪಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಐಟಿ ಅಧಿಕಾರಿಗಳ ಆಟ ನಮಗೆ ಗೊತ್ತಿದೆ’ ಎಂದರು.

‘ಇಷ್ಟು ಕೀಳು ಮಟ್ಟದ ರಾಜಕೀಯ ಮಾಡಿ ನಮ್ಮನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ನಾವು ದರೋಡೆ ಮಾಡಿಲ್ಲ, ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ಐಟಿ ಅಧಿಕಾರಿಗಳು ಕೇಂದ್ರದ ಏಜೆಂಟ್‌ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಹೊಸನಗರದ ಬಳಿ ₹ 2 ಕೋಟಿ ಜಪ್ತಿ ಮಾಡಿದ್ದಾರೆ. ಎಲ್ಲಿಂದ ಜಪ್ತಿ ಮಾಡಿದರು ಎಂಬ ಬಗ್ಗೆ ಮಾಹಿತಿ ನೀಡಿದ್ದಾರಾ’ ಎಂದು ಪ್ರಶ್ನಿಸಿದರು.

error: Content is protected !! Not allowed copy content from janadhvani.com