ನವದೆಹಲಿ: ಪ್ರಮುಖ ವಿಮಾನಯಾನ ಸಂಸ್ಥೆಗಳ ಒಟ್ಟು 117 ವಿಮಾನಗಳು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಹಾರಾಟ ನಿಲ್ಲಿಸಿರುವುದರಿಂದ ಪ್ರಯಾಣಿಕರು ದರ ಏರಿಕೆ ಬಿಸಿ ಎದುರಿಸಬೇಕಾಗಿ ಬಂದಿದೆ.
ವಿಮಾನಗಳ ಪ್ರಯಾಣ ದರದಲ್ಲಿನ ಏರಿಕೆಯಿಂದಾಗಿ ರಜೆ ನಿಮಿತ್ತ ಊರಿಗೆ ತೆರಳಲು ಇಚ್ಛಿಸುತ್ತಿರುವ ಅನಿವಾಸಿ ಭಾರತೀಯರಿಗೆ ಭಾರೀ ಹೊರೆಯಾಗಲಿದೆ.
ಇಂಡಿಗೊ, ಏರ್ ಇಂಡಿಯಾ, ಜೆಟ್ ಏರ್‌ವೇಸ್, ಗೋಏರ್, ಸ್ಪೈಸ್‌ಜೆಟ್, ಏರ್‌ವಿಸ್ತಾರಾ ಮತ್ತು ಏರ್‌ಏಷ್ಯಾ ಸಂಸ್ಥೆಗಳು ಒಟ್ಟಾಗಿ 674 ವಿಮಾನಗಳನ್ನು ಹೊಂದಿವೆ. ಇದರಲ್ಲಿ ಹಲವು ಕಾರಣಗಳಿಂದಾಗಿ 117 ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ ಎಂದು ಕೇರ್ ರೇಟಿಂಗ್ಸ್ ಸಂಸ್ಥೆ ತಿಳಿಸಿದೆ.
ಇಥಿಯೋಪಿಯಾದ ಆಡಿಸ್ ಅಬಾಬಾದಿಂದ ಕೀನ್ಯಾದ ನೈರೋಬಿಗೆ ಹೊರಟಿದ್ದ ಬೋಯಿಂಗ್ ವಿಮಾನ ಪತನಗೊಂಡ ಘಟನೆ ಬಳಿಕ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ನಿರ್ದೇಶನದ ಮೇರೆಗೆ ಸ್ಪೈಸ್‌ಜೆಟ್ 12 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟ ರದ್ದುಗೊಳಿಸಿದೆ. 12 ವಿಮಾನಗಳ ಹಾರಾಟ ನಿಲ್ಲಿಸಿರುವುದರಿಂದ ಸ್ಪೈಸ್‌ಜೆಟ್ ಸಂಸ್ಥೆಯು ಜೆಟ್ ಏರ್‌ವೇಸ್‌ನಿಂದ ಕೆಲವು ವಿಮಾನಗಳನ್ನು ಗುತ್ತಿಗೆಗೆ ಪಡೆಯುವ ಚಿಂತನೆಯನ್ನೂ ನಡೆಸುತ್ತಿದೆ. ಬೇಸಿಗೆ ರಜಾ ದಿನಗಳಲ್ಲಿ ಪ್ರಯಾಣ ದರ ಏರಿಕೆಯಾಗದಂತೆ ತಡೆಯಲು ಹೆಚ್ಚಿನ ವಿಮಾನಗಳ ಹಾರಾಟ ನಡೆಸುವಂತೆ ನೋಡಿಕೊಳ್ಳುವಂತೆ ಸಂಸ್ಥೆಗಳಿಗೆ ಡಿಜಿಸಿಎ ಮಂಗಳವಾರ ಸೂಚನೆ ನೀಡಿತ್ತು.
ಪ್ರಯಾಣಿಕರ ಅನುಕೂಲ, ವಿಮಾನಗಳ ಸುಸ್ಥಿರ ಕಾರ್ಯಾಚರಣೆ ಮತ್ತು ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಸಚಿವಾಲಯವು ಟ್ವೀಟ್ ಮಾಡಿದೆ.
ಎಲ್ಲಾ ಸಂಸ್ಥೆಗಳೂ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಬೇಕು ಮತ್ತು ದೂರುಗಳನ್ನು ಏರ್‌ಸೇವಾ ಜಾಲತಾಣದಲ್ಲಿ ನೋಂದಾಯಿಸಬೇಕು ಎಂದೂ ಸಚಿವಾಲಯ ತಿಳಿಸಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಜೆಟ್ ಏರ್‌ವೇಸ್ ಅನೇಕ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ. ಸ್ಪೈಸ್‌ಜೆಟ್ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಸೇವೆ ನಿಲ್ಲಿಸಿದೆ. ಇಂಡಿಗೋ ತನ್ನ ಕೆಲವು ವಿಮಾನಗಳ ವೇಳಾಪಟ್ಟಿ ಕಡಿತಗೊಳಿಸಿದೆ. ಇದರಿಂದ ವಿಮಾನಗಳ ವೇಳಾಪಟ್ಟಿ ಏರುಪೇರಾಗಿದೆ.