janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಪಾಟ್ನಾ, ಮಾ. 4: “ತಾನು ತೋಡಿದ ಗುಂಡಿಗೆ ತಾನೇ ಬೀಳುವುದು” ಎಂಬಂತೆ ಮಾರ್ಚ್ 3ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿನ ಉಪಸ್ಥಿತಿ ಯಾರು ಭಾರತ ಪರ ಹಾಗೂ ಯಾರು ಪಾಕಿಸ್ತಾನ ಪರ ಎಂಬುದನ್ನು ಸ್ಪಷ್ಟಪಡಿಸಲಿದೆ ಎಂದು ಪ್ರತಿಪಾದಿಸಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಸ್ವತಃ ತಾನೇ ರ್ಯಾಲಿಯಲ್ಲಿ ಪಾಲ್ಗೊಳ್ಳದೆ ಕಟು ಟೀಕೆಗೆ ಒಳಗಾಗಿದ್ದಾರೆ.

“ರ‍್ಯಾಲಿ ನಡೆಯುತ್ತಿರುವಂತೆಯೇ ಟ್ವೀಟ್ ಮಾಡಿರುವ ಗಿರಿರಾಜ್ ಸಿಂಗ್, ತನ್ನ ಲೋಕಸಭಾ ಕ್ಷೇತ್ರ ನವಾಡದಿಂದ ಪಾಟ್ನಾಕ್ಕೆ ಬರುತ್ತಿರುವಾಗ ಅನಾರೋಗ್ಯಕ್ಕೆ ಒಳಗಾದೆ ಎಂದಿದ್ದಾರೆ.

ರ‍್ಯಾಲಿಯಲ್ಲಿ ಭಾಗವಹಿಸಿದವರು ದೇಶದ್ರೋಹಿಗಳು ಎಂದು ಹೇಳಿಕೆ ನೀಡಿ ತಾನೇ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಗಿರಿರಾಜ್ ಸಿಂಗ್ ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

“ರ‍್ಯಾಲಿಯಲ್ಲಿ ಪಾಲ್ಗೊಳ್ಳದೇ ಇರುವವರನ್ನು ದೇಶದ್ರೋಹಿಗಳು ಎಂದು ಪರಿಗಣಿಸುವ ಮಾನದಂಡವನ್ನೇ ಗಿರಿರಾಜ್ ಸಿಂಗ್ ಅವರಿಗೆ ಕೂಡ ಅನ್ವಯಿಸಬೇಕು. ಆದುದರಿಂದ ಅವರು ದೊಡ್ಡ ದೇಶದ್ರೋಹಿ. ದೇಶದ್ರೋಹಿ ಎಂದು ಪರಿಗಣಿಸಿರುವವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗುವುದು ಸಿಂಗ್ ಬೆದರಿಕೆ ಒಡ್ಡಿದ್ದರು. ಅವರು ಯಾವ ದೇಶದ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಾರೆ” ಎಂದು ಪ್ರಶ್ನಿಸಿ ಬಿಹಾರದ ಶಾಸಕ ಪಪ್ಪು ಯಾದವ್ ಟ್ವೀಟ್ ಮಾಡಿದ್ದಾರೆ.

ತನ್ನದೇ ಆದ ತರ್ಕದ ಮೂಲಕ ಗಿರಿರಾಜ್ ಸಿಂಗ್ ಅವರು ದೇಶದ್ರೋಹಿ ಎಂದು ಸಾಬೀತುಪಡಿಸಿದ್ದಾರೆ ಎಂದು ಲಾಲು ಯಾದವ್‌ರ ಪಕ್ಷದ ಹಿರಿಯ ನಾಯಕ ವಿಜಯ್ ಪ್ರಕಾಶ್ ಟೀಕಿಸಿದ್ದಾರೆ.

ಸಚಿವರು ಕ್ಷಮೆ ಯಾಚಿಸುವಂತೆ ಉಪೇಂದ್ರ ಕುಶ್ವಾಹ್ ಅವರ ಆರ್‌ಎಲ್‌ಎಸ್‌ಪಿಯ ರಾಷ್ಟ್ರೀಯ ವಕ್ತಾರ ಫಝಲ್ ಇಮಾಲ್ ಮಲಿಕ್ ಆಗ್ರಹಿಸಿದ್ದಾರೆ.

ಗಿರಿರಾಜ್ ಸಿಂಗ್ ಅವರ ಹೇಳಿಕೆಯನ್ನು ಪ್ರತಿಪಕ್ಷಗಳು ತಿರುಚಿವೆ ಎಂದು ಬಿಜೆಪಿ ಆರೋಪಿಸಿದೆ. ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ಜೆಡಿಯುವ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

error: Content is protected !! Not allowed copy content from janadhvani.com