ಚುನಾವಣೆಗೆ ಮುನ್ನ ಯುದ್ಧ ನಡೆಯಲಿದೆ ಎಂದು ನನ್ನ ಬಳಿ ಹೇಳಿದ್ದರು-ಜನಸೇನಾ ಪಕ್ಷದ ಮುಖ್ಯಸ್ಥ

ಕಡಪ (ಆಂಧ್ರಪ್ರದೇಶ): ಲೋಕಸಭೆ ಚುನಾವಣೆಗೂ ಮುನ್ನ ಯುದ್ಧ ಸಂಭವಿಸಬಹುದು ಎಂದು ‘ಅವರು’ ಎರಡು ವರ್ಷದ ಹಿಂದೆಯೇ ನನ್ನ ಬಳಿ ಹೇಳಿದ್ದರು ಎಂದು ಈ ಹಿಂದೆ ಎನ್ಡಿಎ ಮೈತ್ರಿಕೂಟದಲ್ಲಿದ್ದ ಟಾಲಿವುಡ್ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿದರು.

ಆಂಧ್ರದ ಕಡಪ ಜಿಲ್ಲೆಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಎರಡು ವರ್ಷಗಳ ಹಿಂದೆಯೇ ಅವರು ನನ್ನ ಬಳಿ ಚುನಾವಣೆಗೂ ಮುನ್ನವೇ ಯುದ್ಧ ನಡೆಯಬಹುದು ಎಂದು ಹೇಳಿದ್ದರು. ಅಂದರೆ ನಾವು ಎಂತಹ ಪರಿಸ್ಥಿತಿಯಲ್ಲಿ ಇದ್ದೇವೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ. ಇಂದಿನ ಪ್ರಸ್ತುತ ಸನ್ನಿವೇಶವನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ. ಈಗ ಅಂತಹದ್ದೆ ವಾತಾವರಣ ನಿರ್ಮಾಣವಾಗಿದೆ ಎಂದರು.

ದೇಶಭಕ್ತಿ ಎಂಬುದು ಕೇವಲ ಭಾರತೀಯ ಜನತಾ ಪಾರ್ಟಿಯ ಸ್ವತ್ತಲ್ಲ. ಅಥವಾ ಜನಸೇನಾ ಪಕ್ಷದ ಸ್ವತ್ತೂ ಕೂಡ ಅಲ್ಲ. ಅದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಜವಾಬ್ದಾರಿ. ಭಾರತದಲ್ಲಿ ಹುಟ್ಟಿದ ಒಬ್ಬ ಹಿಂದೂವಿಗೆ ಇರುವ ಹಕ್ಕು ಇಲ್ಲಿ ಜನಿಸಿದ ಮುಸ್ಲಿಮರಿಗೂ ಇದೆ. ನಾವು ಎಲ್ಲರನ್ನು ಸಮಾನರಾಗಿ ಕಾಣಬೇಕು ಎಂದು ಹೇಳಿದರು.

ಈ ಹಿಂದೆ ಪವನ್ ಕಲ್ಯಾಣ್ ಅವರು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿದ್ದರು. ಆದರೆ, ಪ್ರಸ್ತುತ ಎನ್ಡಿಎ ಮೈತ್ರಿಕೂಟವನ್ನು ತೊರೆದಿದ್ದಾರೆ. ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಈ ಹಿಂದೆಯೇ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!