janadhvani

Kannada Online News Paper

ಇಸ್ಲಾಮಿಕ್ ಶೃಂಗಸಭೆಯಲ್ಲಿ ಸುಷ್ಮಾ ಸ್ವರಾಜ್- ಪಾಕಿಸ್ತಾನ ಗೈರು

ಅಬುಧಾಬಿ,ಮಾ.1‌: ಇಸ್ಲಾಮಿಕ್‌ ಸಹಕಾರ ಸಂಘಟನೆ(ಒಐಸಿ) ವಿದೇಶಾಂಗ ಸಚಿವರ ಸಮಿತಿಯ 46ನೇ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಸುಷ್ಮಾ ಸ್ವರಾಜ್‌ ಅವರಿಗೆ ನೀಡಿದ್ದ ವಿಶೇಷ ಆಹ್ವಾನವನ್ನು ಹಿಂಪಡೆಯಲು ಯುಎಇ ನಿರಾಕರಿಸಿದ ಕಾರಣ, ಪಾಕಿಸ್ತಾನವು ಸಭೆಗೆ ಹಾಜರಾಗದಿರಲು ನಿರ್ಧರಿಸಿದೆ.

ಈ ಸಂಬಂಧ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ, ‘ವಿದೇಶಾಂಗ ಸಚಿವರ ಸಮಿತಿಯ ಶೃಂಗಸಭೆಯಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲು ಸುಷ್ಮಾ ಸ್ವರಾಜ್‌ ಅವರಿಗೆ ವಿಶೇಷ ಆಹ್ವಾನ ನೀಡಿರುವುದರಿಂದಾಗಿ ನಾನು ಆ ಸಭೆಯಲ್ಲಿ ಭಾಗವಹಿಸದಿರಲು ನಿರ್ಧಿರಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ಪಾಕಿಸ್ತಾನವು ಒಐಸಿ ಜೊತೆ ಹೊಂದಿರುವ ನಿಕಟ ಸಂಬಂಧವನ್ನು ಪರಿಗಣಿಸಿ ಶೃಂಗಸಭೆಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದೆ. ಅವರು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದರು. ಹಾಗಾಗಿ ಸಭೆಯಲ್ಲಿ ಭಾಗವಹಿಸುವ ತನ್ನ ನಿರ್ಧಾರವನ್ನು ಪಾಕಿಸ್ತಾನ ಮತ್ತೊಮ್ಮೆ ಪರಿಶೀಲಿಸಲಿದೆ ಎಂದು ಫೆಬ್ರುವರಿ 26ರಂದು ಪತ್ರ ಬರೆದಿದ್ದೆ. ನಂತರ ಫೆಬ್ರುವರಿ 28ರಂದು ಸಂಸತ್ತಿನಲ್ಲಿ ವಿರೋಧ ಪಕ್ಷಗಳು ನೀಡಿದ ಸಲಹೆಯ ಮೇರೆಗೆ ನಾನು ಶೃಂಗಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ.

ಸಂಘಟನೆಯ 46ನೇ ಶೃಂಗಸಭೆಯು ಇಂದು ಮತ್ತು ನಾಳೆ ಅಬುಧಾಬಿಯಲ್ಲಿ ನಡೆಯಲಿದ್ದು, ಸುಷ್ಮಾ ಸ್ವರಾಜ್‌ ಅವರು ಗೌರವ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಈ ಸಂಘದ ಸಭೆಗೆ ಭಾರತವನ್ನು ಆಹ್ವಾನಿಸಿರುವುದು ಇದೇ ಮೊದಲು.

error: Content is protected !! Not allowed copy content from janadhvani.com