[wp-svg-icons icon=”pencil” wrap=”i”]..ಇಸ್ಹಾಖ್ ಸಿ. ಐ.ಫಜೀರ್, ಸೌದಿ ಅರೇಬಿಯಾ.
ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲಿ ಮೂರನೇ ಅತಿ ದೊಡ್ಡ ರಾಷ್ಟ್ರ ಮತ್ತು ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುತ್ತಿರುವ ಸೌದಿ ಅರೇಬಿಯಾದ ರಾಜಕುಮಾರ, ರಕ್ಷಣಾ ಸಚಿವ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ರವರು ಇದೇ ಮೊದಲ ಬಾರಿಗೆ ಭಾರತಕ್ಕೆ ಬೇಟಿ ನೀಡಲಿದ್ದಾರೆ.
ಫೆ.19 ರಂದು ದೆಹಲಿಗೆ ತಲುಪಲಿರುವ ರಾಜಕುಮಾರನನ್ನು ಭಾರತದ ರಾಷ್ಟ್ರಪತಿ,ಉಪರಾಷ್ಟ್ರಪತಿ ಮತ್ತು ಪ್ರಧಾನಿಯವರು ಸ್ವಾಗತಿಸಿಲಿದ್ದಾರೆ. 2017 ರಲ್ಲಿ ಸೌದಿ ಅರೇಬಿಯಾದ ಅಭಿವೃದ್ಧಿಯ ಗುರಿಯನ್ನಿಟ್ಟು “ವಿಷನ್ 2030” ಎಂಬ ಘೋಷ ವಾಕ್ಯದೊಂದಿಗೆ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ನಿತಾಖಾತ್ ವ್ಯವಸ್ಥೆಗೆ ತಿದ್ದುಪಡಿ ಮಾಡಿ ರಾಷ್ಟ್ರೀಯ ಕಡ್ಡಾಯ ಉದ್ಯೋಗ ನೀತಿಯನ್ನು ಜಾರಿಗೊಳಿಸಿತ್ತು.
ಇದರ ಪರಿಣಾಮ ಲಕ್ಷಾಂತರ ಅನಿವಾಸಿಗಳು ಉದ್ಯೋಗ ಕಳಕೊಂಡು ಊರಿಗೆ ಮರಳಿದರು.ಸೌದಿ ಅರೇಬಿಯಾದ ಬಿಗಿ ಉದ್ಯೋಗ ನೀತಿಯಿಂದ ಇಲ್ಲಿ ನೆಲೆಸಿರುವ ಸರಿಸುಮಾರು 30 ಲಕ್ಷ ಭಾರತೀಯರು ಸಂಕಷ್ಟದಲ್ಲಿ ಸಿಲುಕುವಂತಾಯಿತು.ಉದ್ಯೋಗ ಕಳಕೊಂಡು ಸಂಕಷ್ಟ ದಲ್ಲಿ ಸಿಲುಕಿದ ಅನಿವಾಸಿ ಭಾರತೀಯರ ಸಚಿತ್ರ ವರದಿಯನ್ನು ಪತ್ರಿಕೆಯೊಂದು ಪ್ರಕಟಿಸಿ ರಾಜಕಾರಣಿಗಳ ಮನ ಮುಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಅದರಂತೆ ಇದಕ್ಕೆ ಸ್ಪಂದಿಸಿದ ಕರ್ನಾಟಕದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ರವರು ಕನಿಷ್ಠ ಬಡ್ಡಿಯಲ್ಲಿ ಕನಿಷ್ಠ 5 ಲಕ್ಷ ರೂ.ನೀಡುವ ಸಹಾಯಧನದ ಯೋಜನೆಯನ್ನು ಹಾಕಿಕೊಳ್ಳುವುದಾಗಿ ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದರು ಇನ್ನೂ ಅನುಷ್ಠಾನವಾಗಿಲ್ಲ. ಸರಕಾರವಾಗಲಿ ಸದನದಲ್ಲಾಗಲಿ ಈ ಬಗ್ಗೆ ಯಾವುದೇ ಚರ್ಚೆ ಕೂಡ ಇದುವರೆಗೆ ನಡೆದಿಲ್ಲ.
ಸೌದಿಯಲ್ಲಿ ನೆಲೆಸಿರುವ ಅನಿವಾಸಿಗಳು ಎದುರಿಸುತ್ತಿರುವ ಸಂಕಷ್ಟಗಳು ಇಂದು ಜಗತ್ತಿಗೆ ತಿಳಿದಿದೆ.
ಆದರೆ ಈವರೆಗೆ ಯಾವ ರಾಷ್ಟ್ರ ಕೂಡ ಸೌದಿ ಅರೇಬಿಯಾದಲ್ಲಿ ಜಾರಿಗೊಂಡ ಬಿಗಿ ಉದ್ಯೋಗ ನೀತಿಯನ್ನು ಸಡಿಲಗೊಳಿಸಲು ಒತ್ತಾಯಿಸದೇ ಇರುವುದು ಖೇಧಕರ. ದಿಢೀರನೆ ಸೌದಿಯಲ್ಲಿ ಉಂಟಾದ ಬದಲಾವಣೆಯಿಂದ ದಿನದಿಂದ ದಿನಕ್ಕೆ ಇಲ್ಲಿ ಅನಿವಾಸಿಗಳ ಬವಣೆ ಹೆಚ್ಚಾಗುತ್ತಿವೆ.ಬದುಕು ಕಟ್ಟಲು ಬಂದ ಅನಿವಾಸಿಗಳ ಕನಸುಗಳು ಕಮರುತ್ತಿವೆ.ಒಂದರ ಮೇಲೊಂದರಂತೆ ಇಲ್ಲಿ ನೆಲೆಸಿರುವ ವಲಸಿಗರ ಮೇಲೆ ನೀತಿ ನಿಯಮಗಳು ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.
ಸೌದಿ ಪ್ರಜೆಗಳಿಗೆ ಉದ್ಯೋಗ ಕಲ್ಪಿಸಿ ಕೊಡುವಲ್ಲಿ ಸೌದಿ ಸರಕಾರವು ಜಾರಿಗೊಳಿಸಿದ ಹೊಸ ನೀತಿಯು ಬಹುತೇಕ ಅನಿವಾಸಿಗರ ಮೇಲೆ ಕರಿಛಾಯೆಯನ್ನು ಮೂಡಿಸಿದೆ.
ಇಲ್ಲಿ ತಮ್ಮ ಉದ್ಯೋಗವನ್ನು ಮುಂದುವರಿಸಲೂ ಆಗದೆ,ತವರೂರಿಗೆ ಮರಳಿ ಸೂಕ್ತ ಉದ್ಯೋಗವೂ ದೊರೆಯದೆ ಅನಿವಾಸಿಗಳು ಮಾನಸಿಕವಾಗಿ ತುಂಬಾ ನೊಂದಿರುತ್ತಾರೆ.
ಇದೀಗ ಸೌದಿ ಅರೇಬಿಯಾದ ರಾಜಕುಮಾರ ಭಾರತಕ್ಕೆ ಭೇಟಿ ನೀಡುವ ದಿನವನ್ನು ನಿಗದಿ ಪಡಿಸಿ ಭಾರತ ತಲುಪುವ ತಯಾರಿಯಲ್ಲಿದ್ದಾರೆ.ಸೌದಿ ಅರೇಬಿಯಾದಲ್ಲಿ ಬಿಗಿಗೊಂಡ ಉದ್ಯೋಗ ನೀತಿಯನ್ನು ಸಡಿಲಗೊಳಿಸಲು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರಮುಖ ನಾಯಕರುಗಳು ಸೇರಿ ರಾಜಕುಮಾರನೊಂದಿಗೆ ನಡೆಸಬೇಕಾದ ಚರ್ಚೆಗೆ ಪೂರ್ವ ಸಿದ್ದತೆ ನಡೆಸಲು ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು, ಅನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗೆಗೆ ಸರ್ವ ಪಕ್ಷ ನಾಯಕರುಗಳ ಸಭೆಯನ್ನು ಕರೆಯಬೇಕಾಗಿದೆ. ಎರಡು ದಿನಗಳ ಕಾಲ ಭಾರತ ವಾಸದಲ್ಲಿರುವ ರಾಜಕುಮಾರನೊಂದಿಗೆ ಮಹತ್ತರವಾದ ಚರ್ಚೆಯನ್ನು ರಾಷ್ಟ್ರ, ನಾಯಕರುಗಳು ನಡೆಸಬೇಕಾಗಿದೆ.
ಸೌದಿಯು ಪ್ರತಿ ದಿನ 1.20 ಕೋಟಿ ಬ್ಯಾರೆಲ್ ತೈಲ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಸದ್ಯ 1.07 ಕೋಟಿ ಬ್ಯಾರೆಲ್‌ನಷ್ಟು ತೈಲವನ್ನು ಉತ್ಪಾದಿಸುತ್ತಿದೆ. ಹೆಚ್ಚುವರಿ ಕಚ್ಚಾ ತೈಲವನ್ನು ಭಾರತಕ್ಕೆ ಪೂರೈಸಲು ರಾಜಕುಮಾರನೊಂದಿಗೆ ಬೇಡಿಕೆಯನ್ನಿಡಬೇಕಾಗಿದೆ.
ಅದರಂತೆ ಭಾರತದಲ್ಲಿ ಇಂಧನ, ಮೂಲಸೌಕರ್ಯ ಮತ್ತು ರಕ್ಷಣಾ ವಲಯದಲ್ಲಿ ಹೂಡಿಕೆ ಹೆಚ್ಚಳ ಮಾಡುವ ಕುರಿತು ಚರ್ಚೆ ನಡೆಸಬೇಕಾಗಿದೆ.
ರಾಜಕುಮಾರನ ಭೇಟಿಯಿಂದ ಫಲಪ್ರದ ಪರಿಣಾಮ ಬೀರಿದರೆ ಉಭಯ ರಾಷ್ಟ್ರಗಳ ಏಳಿಗೆಯ ಜತೆಗೆ ಸೌದಿಯಲ್ಲಿ ಜಾರಿಗೊಂಡ ಬಿಗಿ ಉದ್ಯೋಗ ನೀತಿಯಿಂದ ಕಂಗಾಲಾದ ಅನಿವಾಸಿಗಳ ಮೊಗದಲ್ಲಿ ಸಂತಸದ ಹೊಳೆ ಹರಿಯಲಿದೆ.