“`ಸಾಮ್ರಾಜ್ಯಶಾಹಿಗಳ ಆ ಅಹಂಕಾರ, ಆ ದುರ್ವತರ್ನೆ ಇದೆಯಲ್ಲ, ಅದು ಯಾವಾಗಲೂ ಇಡೀ ಜಗತ್ತನ್ನು ಸ್ಮಶಾನ ಮಾಡುತ್ತಾ ಹೋಗುತ್ತಿದೆ. “ನಮ್ಮ ದೇಶದಲ್ಲಲ್ಲ ತಾನೇ ಯುದ್ಧ ನಡೀತಿರೋದು, ನಮ್ಮ ನಾಡಲ್ಲಲ್ಲ ತಾನೇ?” ಅಂತ ಸಮಾಧಾನ ಮಾಡಿಕೊಳ್ಳುವವರು ನಮ್ಮ ನಡುವೆ ಇದ್ದಾರೆ. ಆದರೆ, ಆ ದೇಶ-ಈ ದೇಶ ಅಂತ ಹಂಚಿಕೊಂಡು, ಪರ-ವಿರೋಧ ನಿಂತು ಜಯಘೋಷ ಕೂಗುವ ಜನರಿಗೆ ನಾನೇನು ಹೇಳಲಿ? ಸಾವು ಮತ್ತು ನೋವಿನ ರುಚಿ ನೋಡದವರಿಗೆ ಮಾತ್ರ ಹೀಗೆ ಕೂಗಾಡಲು ಸಾಧ್ಯ!
ಯುದ್ಧದ ಆ ಭೀಕರ ಕೆನ್ನಾಲಗೆ ಇದೆಯಲ್ಲ, ಅದು ಈಗ ಪ್ರತಿಯೊಬ್ಬನ ಮನೆಬಾಗಿಲಿಗೂ ಬಂದು ನಿಂತಿದೆ. ಮನೆಯಲ್ಲಿ ಅನ್ನ ಬೇಯಲು ಗ್ಯಾಸ್ ಇಲ್ಲದಿದ್ದಾಗ, ವಾಹನಕ್ಕೆ ಹಾಕುವ ಡೀಸೆಲ್-ಪೆಟ್ರೋಲ್ ಬೆಲೆ ಗಗನಕ್ಕೇರಿದಾಗ, ಕೊನೆಗೆ ಜೀವ ಉಳಿಸುವ ಔಷಧಿಗಳೂ ಸೇರಿದಂತೆ ಅವಶ್ಯಕ ವಸ್ತುಗಳ ಪೂರೈಕೆ ನಿಂತು ಹೋದಾಗ… ಆಗ ಗೊತ್ತಾಗುತ್ತೆ ಪ್ರತಿಯೊಬ್ಬನಿಗೂ ಈ ದುರಂತದ ಬಿಸಿ! ಈ ನರಕವನ್ನು ಯುದ್ದಕಾಲದಲ್ಲಿ ಪ್ರತಿಯೊಬ್ಬರು ಅನುಭವಿಸಲೇಬೇಕಾಗುತ್ತದೆ“`
ಅರಬ್ ಲೋಕದ ಮಹಾಕವಿ ಇಮ್ರುಲ್ ಖೈಸ್ ಹೀಗೆ ಹಾಡಿದ್ದ:
> ” ಯುದ್ಧ ಮೊದಲು ಆರಂಭವಾದಾಗ ಅದು ಸುಂದರ ಯುವತಿಯಂತೆ
> ತನ್ನೊಲವ ಅಲಂಕಾರದಿ ಅಜ್ಞಾನಿಗಳ ಸೆಳೆಯುವ ಮೋಹಿನಿಯಂತೆ
> ಒಮ್ಮೆ ಭುಗಿಲೆದ್ದು ಜ್ವಾಲೆಗಳು ವ್ಯಾಪಿಸತೊಡಗಿದಾಗ, ನರೆಗೂದಲಿನ ಕುರೂಪಿ ಮುದುಕಿಯಂತೆ!
> ತನ್ನ ತಲೆಯನ್ನು ತಾನೇ ಬೋಳಿಸಿಕೊಂಡ ಕುರೂಪಿ ಅವಳು
> ಜಿಗುಪ್ಸೆ ತರುವ ಭೀಭತ್ಸ, ಹತ್ತಿರ ಸುಳಿಯಲೂ ಅಸಹ್ಯ ತರುವವಳು
> ಮೊದಲು ಮುತ್ತಿಡಲು ಹಂಬಲಿಸಿದವರೇ ಇಂದು
> ಅವಳ ಕಂಡು ಅಸಹ್ಯದಿಂದ ಬೆದರಿ ದೂರ ಓಡುವರು”
ಯುದ್ಧ ಯಾವತ್ತೂ ಗೆಲ್ಲೋದಿಲ್ಲ. ಯುದ್ಧ ಅಂದ್ರೆ ಅದು ಕೇವಲ ಸಾವು ಮಾತ್ರ. ಮನುಷ್ಯನ ಅಜ್ಞಾನ ಆ ಸುಂದರಿಯನ್ನ, ಅಂದರೆ ಯುದ್ಧದ ಆ ವೈಭವವನ್ನು ನೋಡಿ ಮರುಳಾಗುತ್ತೆ. ಆದರೆ ಸತ್ಯ ಸುಟ್ಟು ಹೋದ ಮೇಲೆ ಅಲ್ಲಿ ಉಳಿಯುವುದು ಕೇವಲ ಬೂದಿ ಮಾತ್ರ. ಯುದ್ಧ ಅಂದ್ರೆ ಸುಂದರಿಯಲ್ಲ, ಅದು ನೂರು ತಲೆಮಾರುಗಳನ್ನು ಕಾಡುವ ಒಂದು ಶಾಪಗ್ರಸ್ತ ಮುದುಕಿ!
*ಯುದ್ಧಕ್ಕೆ ಯಾಕೆ ಹುಲ್ಲು?
ನಮ್ಮ ಮನೆಯಾಗಿರೋ ಈ ಲೋಕದ ಒಂದು ಮೂಲೆಗೆ ಬೆಂಕಿ ಬಿದ್ದಿದೆ. ಅಥವಾ ಮನುಷ್ಯ ಸಮುದಾಯ ಎನ್ನುವ ಈ ಶರೀರದ ಒಂದು ಭಾಗಕ್ಕೆ ಒಂದು ದೊಡ್ಡ ಹುಣ್ಣಾಗಿ ಅದು ಬಾತು ಹೋಗಿದೆ. ಇದಲ್ವಾ ಯುದ್ಧ? ಖಂಡಿತವಾಗಿಯೂ ಈ ಯುದ್ಧದಲ್ಲಿ ನನ್ನದೇನು ಪಾತ್ರವಿಲ್ಲ . ಅಲ್ಲಿ ನಗರಗಳು ಅಗ್ನಿಜ್ವಾಲೆಯಲ್ಲಿ ಸುಟ್ಟು ಕರಕಲಾಗುತ್ತಿವೆ. ಆದರೆ ನಿಮಗೆ ಈ ಯುದ್ಧ ಹೇಗೆ ಬಾಧಿಸುತ್ತೆ? ಈ ಪ್ರಶ್ನೆಯನ್ನ ಆವತ್ತು ಮಲಯಾಳಂ ಸಾಹಿತಿ ವೈಕಂ ಮುಹಮ್ಮದ್ ಬಶೀರ್ ಕೇಳಿದ್ದರು. ಅವರು ತಾವು ವಾಸಿಸುವ ಸ್ಥಳದಲ್ಲಿ ನಡೆಯುವ ಯುದ್ದದ ಬಗ್ಗೆ ಹೇಳುತ್ತಿರಲಿಲ್ಲ, ಬದಲಾಗಿ ಕಾಲ್ಪನಿಕವಾಗಿ ಯುದ್ಧದ ಬಗ್ಗೆ ಮಾತನಾಡುತ್ತಿದ್ದರು. ಬಶೀರ್ ಒಂದು ರಸವತ್ತಾದ ಕಥೆ ಹೇಳ್ತಾರೆ. ಅದು ಕುಂಞಾಮ ಎನ್ನುವ ಹಾಲು ಮಾರುವ ಹೆಂಗಸಿನ ಕಥೆ. ಅವಳು ಪಾಪ, ಓದು-ಬರಹ ಬಾರದ ಮುಗ್ಧೆ. ದಿನಾ ಬಶೀರನಿಗೆ ಹಾಲು ತಂದುಕೊಡುವವಳು. ಹಸು ಹಾಲು ಕೊಡಬೇಕಾದ್ರೆ ಅದಕ್ಕೆ ಹೊಟ್ಟೆ ತುಂಬಾ ಹುಲ್ಲು ಹಾಕಬೇಕು. ಆದರೆ ಯುದ್ಧದ ಕಾಲದಲ್ಲಿ ಹುಲ್ಲಿನ ಬೆಲೆ ಆಕಾಶಕ್ಕೆ ಮುಟ್ಟಿತ್ತು. ಆಗ ಕುಂಞಾಮ ಕೇಳುತ್ತಾಳೆ—”ಯಾಕೆ ಹುಲ್ಲಿಗೆ ಇಷ್ಟೊಂದು ಬೆಲೆ?” ಬಶೀರ್ ಹೇಳ್ತಾರೆ—”ನೋಡು ಕುಂಞಾಮ ಯುದ್ಧ ನಡೀತಿದೆ, ಅದಕ್ಕೆ ಬೆಲೆ ಏರಿದೆ.” ತಕ್ಷಣ ಆ ನಿರಕ್ಷರಿ ಹೆಣ್ಣುಮಗಳು ಒಂದು ಪ್ರಶ್ನೆ ಕೇಳ್ತಾಳೆ
“ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?”
> ಇನ್ನೊಂದು ದೇಶದ ಜನರು, ಹಸಿಗೂಸುಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಕೃಷಿಯನ್ನ ಭಸ್ಮ ಮಾಡುವ ಆ ಸಾಮ್ರಾಜ್ಯಶಾಹಿಗಳಿಗಿಂತ ದೊಡ್ಡ ಭಯೋತ್ಪಾದಕರು ಇನ್ನಾರಿದ್ದಾರೆ ಹೇಳಿ?
> ಯುದ್ಧದ ಆ ಭೀಭತ್ಸ, ಆ ಭಯ ಮತ್ತು ಅನಾಹುತಗಳ ತಾಪ ಪ್ರತಿಯೊಬ್ಬರ ಅಡುಗೆ ಮನೆಗೆ ಬಂದು ಮುಟ್ಟಿದಾಗ ಮಾತ್ರ ನಾವೆಲ್ಲರೂ ಒಕ್ಕೊರಲಿನಿಂದ ಹೇಳುತ್ತೇವೆ—”ಯುದ್ಧ ಬೇಡ” ಅಂತ!
> ಇವತ್ತು ನಾವೆಲ್ಲರೂ ‘ಬಾಂಬು ಹಾಕೋದಿಕ್ಕೆ ಗ್ಯಾಸ್ ಯಾಕೆ ಬೇಕು?’ ಅಂತ ಕೇಳುವಂತಾಗಿದೆ. ಅರಬರ ತೈಲದ ಬಾವಿಗಳಿಗೆ ಬೆಂಕಿ ಬಿದ್ದರೆ, ಇಲ್ಲಿ ನಮ್ಮ ಒಲೆಗಳು ಆರಿಹೋಗುತ್ತವೆ ಅನ್ನೋದು ನಮ್ಮ ದೇಶದ ದುರಂತ ಸತ್ಯ.”
✍️ಡಿ.ಪಿ ಬೈತಾರ್







