ಕಾಸರಗೋಡು, ಕುಣಿಯ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಶತಮಾನೋತ್ಸವದ ಸಮಾರೋಪ ಮಹಾ ಸಮ್ಮೇಳನವು ನಿನ್ನೆ ಕಾಸರಗೋಡು ಜಿಲ್ಲೆಯ ಕುಣಿಯಾ ಪ್ರದೇಶದಲ್ಲಿ ಭವ್ಯ ಸಮಾಪ್ತಿಗೊಂಡಿತು.
ಈ ಮಹಾ ಸಮ್ಮೇಳನದೊಂದಿಗೆ, ಯಾರಿಗೂ ತಿಳಿದಿಲ್ಲದ ಕಾಸರಗೋಡು ಜಿಲ್ಲೆಯ ಕುಣಿಯ ಗ್ರಾಮವು ಅಕ್ಷರಶಃ ವಿಶ್ವ ಇತಿಹಾಸದ ಭಾಗವಾಯಿತು. ನಿನ್ನೆ ಬೆಳಿಗ್ಗೆಯಿಂದ, ಎಲ್ಲಾ ರಸ್ತೆಗಳು ಕುಣಿಯ ಕಡೆಗೆ ಹರಿಯುತ್ತಿದ್ದವು. ಮಧ್ಯಾಹ್ನದ ಹೊತ್ತಿಗೆ, ಎಲ್ಲಾ ಕಾರ್ಯಕರ್ತರು ಕುಣಿಯ ಸಾರ್ವಜನಿಕ ಸಮ್ಮೇಳನ ನಗರವಾದ ವರಕ್ಕಲ್ ಮುಲ್ಲಕೋಯ ತಂಙಳ್ ನಗರಕ್ಕೆ ಬರಲು ಪ್ರಾರಂಭಿಸಿದರು. ಸಂಜೆ, ಶತಮಾನೋತ್ಸವ ಸಮಾರಂಭ ಆರಂಭಿಸುವ ಮೊದಲೇ,ಇಡೀ ಕುಣಿಯ ಸಮೂಹ ಸಂಸ್ಥೆಗಳ ಪಕ್ಕದಲ್ಲಿರುವ ವಿಶಾಲವಾದ ಮೈದಾನವು ತುಂಬಿ ತುಳುಕುತ್ತಿತ್ತು.
ಕೇರಳ ಮತ್ತು ಹೊರ ರಾಜ್ಯಗಳಿಂದ ಸಾವಿರಾರು ವಾಹನಗಳಲ್ಲಿ ಲಕ್ಷಾಂತರ ಜನರು ಕುಣಿಯಾಗೆ ಆಗಮಿಸಿದರು. ಸಮಾರೋಪ ಮಹಾಸಮ್ಮೇಳನವನ್ನು ವೀಕ್ಷಿಸಲು ಪ್ರಪಂಚದ ವಿವಿಧ ಮೂಲೆಗಳಿಂದ ಕಾರ್ಯಕರ್ತರು ಆಗಮಿಸುವುದರೊಂದಿಗೆ, ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪವು ಪ್ರಪಂಚದಾದ್ಯಂತದ ಕಾರ್ಯಕರ್ತರ ಭವ್ಯ ಸಭೆಯಾಗಿ ಮಾರ್ಪಟ್ಟಿತು. ನಿನ್ನೆಯ ಮಹಾಸಮ್ಮೇಳನ ಮೂಲಕ 10,000 ಜನರು ಭಾಗವಹಿಸಿದ್ದ ಎರಡು ದಿನಗಳ ಶಿಬಿರ ಮತ್ತು 33,313 ಜನರು ಭಾಗವಹಿಸಿದ್ದ ಪ್ರತಿನಿಧಿ ಶಿಬಿರವು ಸಮಾಪ್ತಿಗೊಂಡಿತು.
ಸಂಜೆ 4.30 ಕ್ಕೆ ಕೋಝಿಕ್ಕೋಡ್ ಖಾಝಿ ಸಯ್ಯಿದ್ ಮುಹಮ್ಮದ್ ಕೋಯಾ ತಂಙಳ್ ಜಮಲುಲ್ಲೈಲಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮ್ಮೇಳನವು ಮುಕ್ತಾಯಗೊಂಡು ಜನರು ಸಂಪೂರ್ಣವಾಗಿ ಹಿಂದಿರುಗುವಾಗ ಬಹುತೇಕ ಮಧ್ಯರಾತ್ರಿ ಆಗಿತ್ತು. ವಿಶ್ವದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕೈಗಾರಿಕಾ ವಲಯಗಳ ಎಲ್ಲಾ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದ ಸಮಾರೋಪ ಮಹಾ ಸಮ್ಮೇಳನವು ಕೇರಳದ ಇತಿಹಾಸದಲ್ಲಿಯೇ ಅತಿದೊಡ್ಡ ಸಮ್ಮೇಳನವಾಯಿತು.ಜನವರಿ 28, 2024 ರಂದು ಬೆಂಗಳೂರಿನಲ್ಲಿ ನಡೆದ ಘೋಷಣಾ ಸಮ್ಮೇಳನದೊಂದಿಗೆ ಇಡೀ ಶತಮಾನೋತ್ಸವ ಸಮ್ಮೇಳನ ಆರಂಭಗೊಂಡಿತ್ತು.
ಯುಎಇ, ಕತಾರ್, ಒಮಾನ್, ಬಹ್ರೇನ್, ಮಲೇಷ್ಯಾ, ಲಕ್ಷದ್ವೀಪ, ಅಂಡಮಾನ್ ಮತ್ತು ಕರ್ನಾಟಕ ಮುಂತಾದ ಸ್ಥಳಗಳಲ್ಲಿ ವ್ಯಾಪಕ ಸಮ್ಮೇಳನಗಳನ್ನು ಮತ್ತು ಕನ್ಯಾಕುಮಾರಿಯಿಂದ ಮಂಗಳೂರಿನವರೆಗೆ ಮೂರು ರಾಜ್ಯಗಳ ಮೂಲಕ ಸಮಸ್ತ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವದ ಶತಮಾನೋತ್ಸವ ಸಂದೇಶ ಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ಶತಮಾನೋತ್ಸವ ಮಹಾಸಮ್ಮೇಳನವು ಕುಣಿಯಾದಲ್ಲಿ ಮುಕ್ತಾಯವಾಯಿತು.
ಕುಣಿಯಾದಲ್ಲಿ ಶತಮಾನ ಪೂರೈಸಿದ ಐತಿಹಾಸಿಕ ಭವ್ಯ ಮಹಾ ಸಮ್ಮೇಳನವು, ಸಮಾಜದಲ್ಲಿ ಸಮಸ್ತ ಕೇರಳ ಜಮ್ಇಯತುಲ್ ಉಲಮಾದ ಆಳವಾದ ಬೇರುಗಳಿಗೆ ನೇರ ಸಾಕ್ಷಿಯಾಗಿದೆ.
ಸಮಸ್ತದಿಂದ ದೂರ ಸರಿದವರು ವಾಪಸ್ ಬರಬೇಕು- ಜಿಫ್ರಿ ತಂಙಳ್
ಕುಣಿಯ : ಸಮಸ್ತ ಮುಂದಿಟ್ಟಿರುವ ಆಶಯಾದರ್ಶಗಳನ್ನು ಪಾಲಿಸದೇ, ಸಮಸ್ತದಿಂದ ದೂರ ಸರಿದಿರುವ ವ್ಯಕ್ತಿಗಳು ಅಥವಾ ಶಿಕ್ಷಣ ಸಂಸ್ಥೆಗಳು ಮತ್ತು ಸುನ್ನೀ ಸಂಘಟನೆಗಳು ಸಮಸ್ತದ ನಿರ್ಣಯಗಳನ್ನು ಅಂಗೀಕರಿಸಿ ಮರಳಿ ಬರಬೇಕೆಂದು ಜಿಫ್ರಿ ತಂಙಳ್ ಕರೆ ನೀಡಿದರು. ಇದಾಗಿದೆ ಸತ್ಯ ಸಮಸ್ತ ಎಂಬುದಕ್ಕೆ ಇಲ್ಲಿ ನೆರೆದಿರುವ ಜನಸಾಗರವೇ ಸಾಕ್ಷಿ ಎಂದು ತಂಙಳ್ ಹೇಳಿದರು.
ಸುನ್ನೀ ಸಮ್ಮೇಳನ ಎಂಬ ನಿಟ್ಟಿನಲ್ಲಿ ಅದನ್ನು ವಿಜಯಗೊಳಿಸಬೇಕೆಂಬ ಉದ್ದೇಶದಿಂದ ಗ್ರೂಪ್ ನೋಡದೇ ಲಕ್ಷಾಂತರ ಸುನ್ನೀ ಕಾರ್ಯಕರ್ತರು ಈ ಸಮ್ಮೇಳನಕ್ಕೆ ಆಗಮಿಸಿದ್ದರು. ಅಲ್ಲಿ ನೆರೆದಿದ್ದವರೆಲ್ಲಾ ಕೇವಲ ‘ಸಮಸ್ತ’ ದ ಕಾರ್ಯಕರ್ತರೆಂದು ಭಾವಿಸಿ ಜಿಫ್ರಿ ತಂಙಳ್ ಈ ಹೇಳಿಕೆಯನ್ನು ನೀಡಿರಬಹುದೇ?
ಏತನ್ಮಧ್ಯೆ, ಇದು 1989 ರಲ್ಲಿ ಸಮಸ್ತದಲ್ಲುಂಟಾದ ರಾಜಕೀಯ ಪ್ರೇರಿತ ಭಿನ್ನಾಭಿಪ್ರಾಯದಿಂದಾಗಿ ಹೊರನಡೆದು, ಸಮಸ್ತ ಮುಶಾವರವನ್ನು ಪುನರ್ರಚಿಸಿ ಯಾವುದೇ ರಾಜಕೀಯ ಪಕ್ಷಗಳ ಕೈಗೊಂಬೆಯಾಗದೆ, ಸ್ವತಂತ್ರವಾಗಿ ಸುನ್ನತ್ ಜಮಾಅತ್ತಿಗಾಗಿ ಕಾರ್ಯಾಚರಿಸುತ್ತಿರುವ ಎ.ಪಿ. ವಿಭಾಗ ಸಮಸ್ತವನ್ನು ಜಿಫ್ರಿ ತಂಙಳ್ ವಾಪಸ್ ಕರೆದಿದ್ದಾರೆ ಎಂಬ ಮಟ್ಟಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಗೊಳ್ಳುತ್ತಿದೆ.
ರಾಜಕೀಯ ಮುಕ್ತವಾಗಿ ಕಾರ್ಯಾಚರಿಸಲು, ಜಿಫ್ರಿ ತಂಙಳ್ ನೇತೃತ್ವದ ಸಮಸ್ತ ಮುಶಾವರ ಪ್ರಯತ್ನಿಸುತ್ತಿದ್ದರೂ, ಕೆಲವು ಷಡ್ಯಂತ್ರಗಳಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಈಗಲೂ ಮುಸ್ಲಿಂ ಲೀಗನ್ನು ಕೈಬಿಟ್ಟು ಯಾವುದೇ ಸಭೆ, ಸಮಾರಂಭಗಳನ್ನು ನಡೆಸಲು ಸಾಧ್ಯವಿಲ್ಲದ ಸಮಸ್ತ, ವರಕ್ಕಲ್ ಮುಲ್ಲಕೋಯ ತಂಙಳರು ಸ್ಥಾಪಿಸಿದ, ಅದೇ ಉದ್ದೇಶದೊಂದಿಗೆ ಅಜೇಯವಾಗಿ ಮುನ್ನುಗ್ಗುತ್ತಿರುವ ಎ.ಪಿ.ವಿಭಾಗದ ಸಮಸ್ತವನ್ನು ವಾಪಸ್ ಕರೆಯುತ್ತಾರೆಂಬುದು ಅಚ್ಚರಿ ಮೂಡಿಸುವಂತಿದೆ. ಮತ್ತು ಸಮಸ್ತ ಅಧೀನದ ಸುನ್ನೀ ಸಂಘಟನೆಗಳಾದ ಎಸ್ಸೆಸ್ಸೆಫ್, ಎಸ್ ವೈಎಸ್ ಮಾತ್ರವಲ್ಲದೆ, ಸಮಸ್ತದ ಅಂಗೀಕೃತ ಧ್ವಜವೂ ಎ.ಪಿ.ವಿಭಾಗ ಸಮಸ್ತದಲ್ಲೇ ಇದೆ. ಮಾತೃ ಸಂಘಟನೆಗೆ ಮರಳಬೇಕೆಂದರೆ ನೂತನವಾಗಿ ಸಂಘಟಿಸಲಾದ ಎಸ್ಕೆ ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ನ್ನು ಬಿಟ್ಟು ಸುನ್ನೀ ವಿದ್ಯಾರ್ಥಿಗಳು ಎಸ್ಸೆಸ್ಸೆಫ್ ನೊಂದಿಗೆ ಕೈಜೋಡಿಸಬೇಕಾಗಿದೆ. ಇದು ಸಾಧ್ಯವೇ?
ಆದರೆ, ಸುನ್ನೀ ಸಂಘಟನೆಗಳು ಸುನ್ನತ್ ಜಮಾಅತ್ತಿಗಾಗಿ ಒಗ್ಗಟ್ಟಾಗಿ ಕಾರ್ಯಾಚರಿಸುವಂತೆ ಕರೆ ನೀಡುವುದು ಅಭಿನಂದನಾರ್ಹವಾಗಿದೆ ಮತ್ತು ಸಮಾಜಕ್ಕೆ ಅನಿವಾರ್ಯ ಕೂಡ.






