ಕಾಸರಗೋಡು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಅಧ್ಯಯನ ಶಿಬಿರ ಮತ್ತು ಅಂತರರಾಷ್ಟ್ರೀಯ ಮಹಾಸಮ್ಮೇಳನವನ್ನು ಕಾಸರಗೋಡಿನ ಕುನಿಯ ಬಹು ವರಕ್ಕಲ್ ಮುಲ್ಲಕೋಯ ತಂಙಳ್ ನಗರದಲ್ಲಿ ವಿಶಾಲವಾದ ಸುಮಾರು 500 ಎಕರೆ ಜಾಗದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನದ ಎಲ್ಲಾ ಖರ್ಚು ವೆಚ್ಚಗಳನ್ನು ಕುನಿಯ ನಿವಾಸಿ, ಉದ್ಯಮಿ ಇಬ್ರಾಹಿಂ ಹಾಜಿ ಎಂಬವರು ವಹಿಸಿಕೊಂಡಿರುವುದು ವಿಶೇಷವಾಗಿದೆ.

ಫೆ.4 ರಂದು ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರತಿದ್ದು, ಸಮ್ಮೇಳನದ ಅಂಗವಾಗಿ 3 ದಿನ ನಡೆಯುವ ಅಧ್ಯಯನ ಶಿಬಿರದಲ್ಲಿ 33,313 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮಾರಂಭದ ಅಂಗವಾಗಿ ‘ಎಕ್ಸ್ಪೋ’ ಪ್ರದರ್ಶನವನ್ನು ಆಯೋಜಿಸಲಾಗಿದೆ.ಇಸ್ಲಾಮಿನ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಸಮುದಾಯದೊಳಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ಪಂಡಿತ ಸಂಘಟನೆಯ ಹೆಸರಾಗಿದೆ ಸಮಸ್ತ.


ಫೆ.8ರಂದು ಅಂತರರಾಷ್ಟ್ರೀಯ ಮಹಾಸಮ್ಮೇಳನ ನಡೆಯಲಿದೆ. ಇದರಲ್ಲಿ ಸುಮಾರು 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಸಮಾವೇಶಕ್ಕೆ ಆಗಮಿಸುವ ಗಣ್ಯರಿಗೆ 1,200 ಆಸನ ವ್ಯವಸ್ಥೆ ಇರುವ ವೇದಿಕೆ, ಇದರ ಸಲುವಾಗಿ ಜರ್ಮನ್ ಟೆಕ್ನಾಲಜಿ ಆಧಾರಿತ ಮೂರು ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಬೃಹತ್ ಸ್ವಾಗತ ಕಮಾನುಗಳೊಂದಿಗೆ ವೇದಿಕೆ ಸಿಂಗಾರಗೊಂಡಿದೆ.
‘ಸಮ್ಮೇಳನ ಎಂದರೆ ಒಂದಿಷ್ಟು ಲಕ್ಷ ಜನ ಬಂದು ಹೋಗುವುದು ಅಲ್ಲ. ಇದೊಂದು ಆಧ್ಯಾತಿಕ ಲೋಕ ಆಗಬೇಕಾಗಿದೆ. ಏಕತೆ ಮತ್ತು ಸಾಮಾಜಿಕ ಭದ್ರತೆಗೆ ಸಮಸ್ತದ ಅಸ್ವಿತ್ವ ಅನಿವಾರ್ಯ. ಸಂಸ್ಕಾರ ವಿಜ್ಞಾನ ಶಿಕ್ಷಣ ಸಹೋದರತೆ ಮೊಳಗಬೇಕು. ನಮ್ಮಲ್ಲಿರುವ ಪರಸ್ಪರ ದೂಷಣೆ ಅಪಸ್ವರ ಅಪನಂಬಿಕೆ ದೂರವಾಗಬೇಕು. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾಗಿದೆ. ಇದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ. ಇದು ಈ ಸಮ್ಮೇಳನದ ಉದ್ದೇಶ’ ಎಂದು ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾದ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಭಾಗವಹಿಸುವವರ ಆರೋಗ್ಯ ರಕ್ಷಣೆಗಾಗಿ ಎಸ್‌ಕೆಎಸ್‌ಎಸ್‌ಎಫ್‌ನ ವೈದ್ಯಕೀಯ ವಿಭಾಗ ‘ಮೀಮ್’ ವತಿಯಿಂದ ಮಿನಿ ಆಸ್ಪತ್ರೆ ಮತ್ತು 20 ಲೈವ್ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. 1 ಸಾವಿರ ಶೌಚಾಲಯ, ಸ್ನಾನದ ಮನೆ, ಏಕಕಾಲದಲ್ಲಿ 1 ಸಾವಿರ ಮಂದಿ ವುಲೂಹ್ ಮಾಡುವುದಕ್ಕಾಗಿ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ವ್ಯವಸ್ಥೆಯನ್ನು ಎಸ್‌ಕೆಎಸ್‌ಎಸ್‌ಎಫ್ ವಿಕಾಯ ತಂಡದ ಸಾವಿರಾರು ಮಂದಿ ಸ್ವಯಂಸೇವಕರು ನೋಡಿಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ಟ್ಯಾಂಕ್‌ನಲ್ಲಿ ನೀರಿನ ವ್ಯವಸ್ಥೆ, ವಸ್ತು ಪ್ರದರ್ಶನ, ನೂರಾರು ಮಾರಾಟ ಮಳಿಗೆಗಳು ಸೇರಿ ಎಲ್ಲವನ್ನೂ ವ್ಯವಸ್ಥಿತವಾಗಿ ರೂಪುಗೊಳಿಸಲಾಗಿದೆ.

ಇರಾಕ್‌ನ ಮಾಜಿ ಗ್ರ್ಯಾಂಡ್ ಮುಫ್ತಿಯೊಂದಿಗೆ ಜಿಫ್ರಿ ತಂಙಳ್
ಫೆಬ್ರವರಿ 8ರ ಕಾರ್ಯಕ್ರಮ
ಬೆಳಗ್ಗೆ 9 ಗಂಟೆಗೆ ಶಿಬಿರದ ಮೊದಲ ಅಧಿವೇಶನವು ಸೈಯ್ಯದ್ ಮುಈನಲಿ ಶಿಹಾಬ್ ತಂಬಳ್ ಅವರ ಅಧ್ಯಕ್ಷತೆಯಲ್ಲಿ ಎ.ವಿ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಉದ್ಘಾಟಿಸುವರು. ಬೆಳಗ್ಗೆ 11.30ಕ್ಕೆ ಸನಾಈ ಪದವಿ ಪ್ರದಾನ ಹಾಗೂ ಮಧ್ಯಾಹ್ನ 1 ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಇದನ್ನು ಅಸ್ತರಲಿ ಫೈಝಿ ಪಟ್ಟಿಕ್ಕಾಡ್ ಉದ್ಘಾಟಿಸುವರು.
ವೇದಿಕೆ-2ರಲ್ಲಿ ಬೆಳಗ್ಗೆ 8.30ಕ್ಕೆ ಪ್ರವಾಸಿ ಸಮಾಗಮವನ್ನು ಸಮಸ್ತ ಪ್ರವಾಸಿ ಸೆಲ್ ಅಧ್ಯಕ್ಷ ಹಂಗುಕುಟ್ಟಿ ಬಾಖವಿ ಉದ್ಘಾಟಿಸುವರು. ಅಬೂಬಕ್ಕರ್ ಅಲ್ ಖಾಸಿಮಿ (ಕತಾರ್) ಅಧ್ಯಕ್ಷತೆ ವಹಿಸುವರು. ವೇದಿಕೆ-3ರಲ್ಲಿ ಬೆಳಗ್ಗೆ 9 ಗಂಟೆಗೆ ಗ್ಲೋಬಲ್ ಉಲಮಾ ಸಮ್ಮೇಳನ ನಡೆಯಲಿದೆ.
ಫೆಬ್ರವರಿ 8ರಂದು ಸಂಜೆ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಬಳ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಈಜಿಪ್ಟ್ನ ಅಲ್-ಅಝರ್ ವಿಶ್ವವಿದ್ಯಾಲಯದ ಡೈರೆಕ್ಟರ್ ಡಾ. ಸಲಾಮಾ ಜುಮುಅ ದಾವೂದ್ ಉದ್ಘಾಟಿಸುವರು. ಪಾಣಕ್ಕಾಡ್ ಸೈಯ್ಯದ್ ಸಾದಿಖಲಿ ಶಿಹಾಬ್ ತಂಜಳ್ ಮುಖ್ಯ ಭಾಷಣ ಮಾಡಲಿದ್ದಾರೆ.ಪ್ರೊ. ಕೆ. ಅಲಿಕುಟ್ಟಿ ಮುಸ್ಲಿಯಾರ್ ಶತಮಾನೋತ್ಸವ ಸಂದೇಶ ನೀಡಲಿದ್ದಾರೆ.ಲುಲು ಇಂಟರ್‌ನ್ಯಾಷನಲ್ ಗ್ರೂಪ್ ಚೇರ್ಮನ್ ಎಂ.ಎ. ಯೂಸುಫ್ ಅಲಿ ಅವರಿಗೆ ಸಮಸ್ತ ಸೆಂಟನರಿ ಅವಾರ್ಡ್ ಪ್ರದಾನಿಸಲಾಗುವುದು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕ ಮುಖ್ಯಮಂತ್ರಿ ಕೆ. ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ವಿರೋಧ ಪಕ್ಷದ ಉಪನಾಯಕ ಪಿ.ಕೆ. ಕುಂಞಾಲಿಕುಟ್ಟಿ ಮತ್ತು ಇತರ ಗಣ್ಯರು ಉಪಸ್ಥಿತರಿರುತ್ತಾರೆ.
ಸಮಸ್ತ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಪೊಲೀಸರಿಂದ ವಿಶೇಷ ಸೂಚನೆ
1. ಸಮ್ಮೇಳನ ನಗರಕ್ಕೆ ಬರುವವರು ತಮ್ಮ ವಾಹನಗಳನ್ನು ಪಾರ್ಕಿಂಗ್ ಪ್ರದೇಶದಲ್ಲಿ ಮಾತ್ರ ನಿಲ್ಲಿಸಿ ಹೊರಗೆ ಬಂದು ಸಮ್ಮೇಳನ ನಗರಕ್ಕೆ ನಡೆದುಕೊಂಡು ಹೋಗಬೇಕು. ಯಾವುದೇ ಸಂದರ್ಭದಲ್ಲಿ ಅವರು ತಮ್ಮ ವಾಹನಗಳನ್ನು ಸಮ್ಮೇಳನ ನಗರದ ಬಳಿ ಅಥವಾ ರಸ್ತೆಯಲ್ಲಿ ನಿಲ್ಲಿಸಬಾರದು.
2. ಸಮ್ಮೇಳನದ ನಂತರ, ಅವರು ಪಾರ್ಕಿಂಗ್ ಪ್ರದೇಶಕ್ಕೆ ನಡೆದುಕೊಂಡು ಹೋಗಿ ತಮ್ಮ ವಾಹನಗಳನ್ನು ಹತ್ತಿ ಹಿಂತಿರುಗಬೇಕು. ವಾಹನಗಳನ್ನು ಸಮ್ಮೇಳನ ನಗರಕ್ಕೆ ತರಬಾರದು.
3. ಪೊಲೀಸರು/ಸ್ವಯಂಸೇವಕರು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
4. ಸಮ್ಮೇಳನಕ್ಕೆ ಬರುವವರು ಕಾಲ್ನಡಿಗೆಯಲ್ಲಿ NH 66 ದಾಟುವುದನ್ನು ತಪ್ಪಿಸಬೇಕು. NH ರಸ್ತೆಯಲ್ಲಿ ನಡೆಯಲು ಅವಕಾಶವಿಲ್ಲ.
5. ಸಮ್ಮೇಳನಕ್ಕೆ ಬರುವವರು ಮಾಸ್ಕ್ ಧರಿಸಿ ಸಾಕಷ್ಟು ಕುಡಿಯುವ ನೀರು ಮತ್ತು ತಿನಿಸುಗಳನ್ನು ಕೈಯಲ್ಲಿರಿಸಬೇಕು.
6. ಯಾರೂ ಕೂಡಾ ಸಮ್ಮೇಳನ ನಗರದ ದಾರಿಯಲ್ಲಿ ಅಥವಾ ರಸ್ತೆಯಲ್ಲಿ ಉಳಿಯಬಾರದು. ವಿವಿಧ ವಿಭಾಗಗಳಾಗಿ ವಿಂಗಡಿಸಲಾದ ಸಮ್ಮೇಳನ ನಗರದಲ್ಲಿ ಮಾತ್ರ ಉಳಿಯಬೇಕು.
7. ಸಮ್ಮೇಳನಕ್ಕೆ ಬರುವ ಸ್ಥಳೀಯರು ವಾಹನಗಳನ್ನು ತಪ್ಪಿಸಿ ಸಾಧ್ಯವಾದಷ್ಟು ನಡೆದುಕೊಂಡೇ ಸಮ್ಮೇಳನ ನಗರಕ್ಕೆ ಬರಬೇಕು.
8. NH 66 ರಲ್ಲಿ ವಾಹನಗಳನ್ನು ನಿಲ್ಲಿಸುವುದು ಅಥವಾ ಪಾರ್ಕ್ ಮಾಡುವುದು ಸಲ್ಲದು.
9. ಹಿರಿಯ ನಾಗರಿಕರು ಮತ್ತು ಅಂಗವಿಕಲರು ತಮ್ಮ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
10. ಯಾವುದೇ ತುರ್ತು ಪರಿಸ್ಥಿತಿ ಅಥವಾ ವೈದ್ಯಕೀಯ ಸಹಾಯದ ಸಂದರ್ಭದಲ್ಲಿ, ತಕ್ಷಣವೇ ಹತ್ತಿರದ ಪೊಲೀಸ್/ಸ್ವಯಂಸೇವಕರ ಸೇವೆಗಳನ್ನು ಪಡೆಯಬೇಕು.
11. ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ನಿರ್ಜನ ಪ್ರದೇಶಕ್ಕೆ ತೆರಳಬೇಕು ಮತ್ತು ಭಯಭೀತರಾಗಬಾರದು ಮತ್ತು ಸಂಯಮವನ್ನು ಕಾಯ್ದುಕೊಳ್ಳಬೇಕು.
12. ಜನ ದಟ್ಟಣೆಯಿಂದ ಸಂಭವಿಸಬಹುದಾದ ಅಪಘಾತಗಳನ್ನು ತಪ್ಪಿಸಲು, ಸಂಯಮವನ್ನು ಕಾಯ್ದುಕೊಳ್ಳಬೇಕು ಮತ್ತು ಪೊಲೀಸ್/ಸ್ವಯಂಸೇವಕರು ನೀಡುವ ಸೂಚನೆಗಳನ್ನು ಪಾಲಿಸಬೇಕು.





