✍️ ಎಂ ಹೆಚ್ ಹಸನ್ ಝುಹ್ರಿ, ಮಂಗಳಪೇಟೆ
ಬರಹ ಅಲ್ಲಾಹನು ನೀಡುವ ಅನುಗ್ರಹವಾಗಿದೆ.ಅದನ್ನು ಅಲ್ಲಾಹನ ದೀನ್ ಗಾಗಿ ಸದ್ಬಳಕೆ ಮಾಡಲು ಭಾಗ್ಯಬೇಕು.ಆ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ತನಗೆ ದೊರೆತ ಬರಹ ಎಂಬ ಸೌಭಾಗ್ಯ ವನ್ನು ಪುಸ್ತಕ ಮತ್ತು ಅಲ್ಲಾಹನ ರಸೂಲ್ ﷺರವರ ಚರಿತ್ರೆ ಬರೆಯಲು ಮತ್ತು ಸ್ವಲಾತ್ ನ ಮಹತ್ವ ಲಿಖಿಸಲು ಉಪಯೋಗಿಸಿಕೊಂಡವರು ಮಂಗಳಪೇಟೆ ಇಸ್ಮಾಯಿಲ್ ನಈಮಿಯವರು. ಅವರಂತೆ ಸ್ವಲಾತ್ನ ಮಹತ್ವ ಮತ್ತು ಪೈಗಂಬರ್ ﷺ ಚರಿತ್ರೆ ಬರೆದ ಮತ್ತೊಬ್ಬ ಕನ್ನಡ ಸಾಹಿತಿಯನ್ನು ಮುಸ್ಲಿಂ ಸಮುದಾಯದಲ್ಲಿ ಕಾಣಲು ಸಿಗುವುದು ಅಪರೂಪ.ಸ್ವಲಾತಿನ ಮಹತ್ವ ಹಾಗೂ ಪೈಗಂಬರ್ ﷺ ರ ಜೀವನ ಚರಿತ್ರೆ ಅಥವಾ ಅವರ ಗುಣಗಾನ ಗಳನ್ನು ಬರೆಯಲು ಸಿಗುವಷ್ಟು ಅದೃಷ್ಟವಂತರು ಬೇರೆಯಾರಿದ್ದಾರೆ.ಅಂತಹ ಯೋಗ ಸಿಕ್ಕವರು ಇಸ್ಮಾಯಿಲ್ ರಝಾ ನಈಮಿಯವರು. ಇದು ಅತಿಶಯೋಕ್ತಿಯಲ್ಲ. ಅವರಿಗೆ ಸಿಕ್ಕ ಅನುಗ್ರಹದ ಅನಾವರಣ ವಷ್ಟೇ.
ಪೈಗಂಬರ್ ﷺರ ಜೀವನ ಚರಿತ್ರೆಯನ್ನು ತಿಳಿಯಲು ಬಯಸದವರು ಯಾರೂ ಇರಲಾರರು. ಸಾಧಾರಣ ಜನರಿಗೆ ಚರಿತ್ರೆ ಗಳು ಕಲಿಯಲು ವ್ಯವಸ್ಥೆಗಳಿರುವುದಿಲ್ಲ. ಅಂತವರಿಗೆ ಪುಸ್ತಕಗಳೇ ಆಸರೆ. ಇಸ್ಮಾಯಿಲ್ ನಈಮಿಯವರು ಸರಿಸುಮಾರು ಇಪ್ಪತ್ತೆರಡು ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿಯೊಂದು ಪುಸ್ತಕವೂ ಅತ್ಯಮೂಲ್ಯ ವಾಗಿದೆ. ಓದಲೇ ಬೇಕಾದ ಪುಸ್ತಕವದು. ಘನತೆ ತುಂಬಿದ ಬರಹಗಳ ಮೂಲಕ ಸಮೃದ್ಧವಾದ ಪುಸ್ತಕಗಳು. ಬೆಲೆ ಕಟ್ಟಲಾಗದ ಅರಿವಿನ ಸಾಗರ ಆ ಪುಸ್ತಕದೊಳಗಿದೆ. “ಖುರ್ಆನ್ ಬಣ್ಣಿಸಿದ ಪೈಗಂಬರ್ ﷺ, ಪೈಗಂಬರ್ ﷺ ರ ಪವಿತ್ರ ನಾಮಗಳು, ಪೈಗಂಬರ್ ﷺ ಮುಗುಳ್ನಕ್ಕ ಕ್ಷಣಗಳು, ಪೈಗಂಬರ್ﷺ ಪ್ರೀತಿಯ ಪತ್ನಿಯರು, ಮಾತಾಪಿತರ ಹಕ್ಕುಗಳು, ಅನ್ವರೇ ಶರೀಫ್, ಸ್ವಲಾತಿನ ಮಹಿಮೆ, ಬದುಕು ಕಲಿಸುವ ಅಮೃತ ಬಿಂದುಗಳು, ಹೃದಯ ದೀಪ,ಮಾತನಾಡುವ ಜೀವಿಗಳು,ಖುರ್ಆನ್ ಮಾತನಾಡುವ ಮಹಿಳೆ, ಮೂವತ್ತು ಸತ್ಯ ಕಥೆಗಳು. ಹೀಗೆ, ತನ್ನ ಬರಹ ಕಲೆಯನ್ನು ಅತ್ಯುತ್ತಮ ಪುಸ್ತಕ ರಚನೆಗೆ ಬಳಕೆ ಮಾಡಿಕೊಂಡವರು ನಈಮಿಯವರು.
ಮೌಲ್ಯಯುತ ಪುಸ್ತಕಗಳನ್ನು ಹೊರ ತರುವ ಮೂಲಕ ಅವರು ಸುನ್ನೀ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧಿ ಮಾಡಿದರು. ಯಾವ ಪುಸ್ತಕಗಳನ್ನು ತೆರೆದರೂ ಓದಲೇ ಬೇಕಾದ ಅನೇಕಾರು ವಿಷಯಗಳಿವೆ. ಇಸ್ಲಾಮಿನ ಅರಿವು ಎಂಬ ಸೌಂದರ್ಯ ವನ್ನು ಆಸ್ವಾದಿಸಬೇಕಾದರೆ ನಈಮಿಯವರ ಪುಸ್ತಕಗಳನ್ನು ಓದಲೇ ಬೇಕು.ಬರಹ ಜಗತ್ತಿನಿಂದ ಅಂತರ್ಜಾಲಕ್ಕೂ ಅವರು ತನ್ನ ದಅ್ವಾ ಕ್ಷೇತ್ರವನ್ನು ವಿಸ್ತಾರ ಗೊಳಿಸಿದ್ದಾರೆ.
ಸೀರತೇ ಮುಸ್ತಫಾ ಎಂಬ ತಲೆಬರಹದೊಂದಿಗೆ ಅಂತರ್ಜಾಲದಲ್ಲಿ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ ಗಾಥೆಯನ್ನು ಬರೆಯುತ್ತಿದ್ದಾರೆ. ಅದರ ಜೊತೆಗೆ ವಿವಿಧ ವಿಷಯಗಳ ಕುರಿತ ಬರಹಗಳು ಅಂತರ್ಜಾಲದಲ್ಲಿ ಕಾಣಬಹದು. ಸ್ವಂತ ಯೂಟ್ಯೂಬ್ ಚಾನಲ್ ಮೂಲಕ ಸಂದರ್ಭೋಚಿತ ವಿಷಯಗಳ ಕುರಿತು ಜ್ಞಾನ ಪ್ರಸಾರ ಪಡಿಸುತ್ತಿದ್ದಾರೆ. ಬರಹ,ಭಾಷಣಗಳ ಮೂಲಕ ಅಲ್ಲಾಹನ ಇಲ್ಮ್ ಎಂಬ ಪ್ರಕಾಶವನ್ನು ಜನರಿಗೆ ವಿತರಿಸಲು ವಿವಿಧ ಮಜಲುಗಳನ್ನು ಆಯ್ಕೆ ಮಾಡಿಕೊಂಡ ಅವರು ಉತ್ತಮ ವಾಗ್ಮಿಯೂ ಆಗಿದ್ದಾರೆ. ಕನ್ನಡ, ಬ್ಯಾರಿ ಭಾಷೆಗಳಲ್ಲಿ ಸುಶ್ರಾವ್ಯ ವಾಗಿ ಭಾಷಣ ಮಾಡಬಲ್ಲರು. ಬರಹ,ಭಾಷಣಗಳ ಮೂಲಕ ಇಲ್ಮ್ ಕಲಿಸಲು ಸಿಗುವ ಭಾಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೆ ಇದೆಯೇ ? ಅಲ್ಲಾಹನು ನಈಮಿಯವರಿಗೆ ಆ ಅನುಗ್ರಹ ನೀಡಿದ್ದಾನೆ.
ದರ್ಸ್ ಕಲಿಯುವಾಗಲೇ ಬರಹವನ್ನು ಉಸಿರಾಗಿಸಿಕೊಂಡಿದ್ದ ನಈಮಿಯವರು, ತನ್ನ ಬರಹ ಮೂಲಕ ಸಹ ವಿದ್ಯಾರ್ಥಿಗಳ ಕಷ್ಟಕ್ಕೆ ನೆರವಾಗುತ್ತಿದ್ದರು. ಪ್ರತ್ಯೇಕ ದಿನಗಳಲ್ಲಿ ವಿಶೇಷ ಸಂಚಿಕೆ ಹೊರ ತರುತ್ತಿದ್ದರು.ಅದರ ಆರ್ಥಿಕ ಹೊರೆ ಇಳಿಸಲು ಏಕಾಂಗಿಯಾಗಿ ಮಂಗಳೂರು ಸುತ್ತಿ ಜಾಹಿರಾತು ಕಲೆಹಾಕಿ ಪತ್ರಿಕೆ ಪ್ರಕಾಶನ ಮಾಡುತ್ತಿದ್ದರು, ಸಹ ವಿದ್ಯಾರ್ಥಿಗಳು ಅದನ್ನು ಮಾರಾಟ ಮಾಡುವ ಜವಾಬ್ದಾರಿ ವಹಿಸುತ್ತಿದ್ದರು. ಮಾರಾಟ ವಾದ ಪತ್ರಿಕೆಯಿಂದ ಎರಡು ರುಪಾಯಿ ಮಾತ್ರ ಪಡೆದು ಇತರ ಲಾಭದ ದೊಡ್ಡ ಮೊತ್ತವನ್ನು ಮಾರಾಟ ಮಾಡಿದ ಸಹ ವಿದ್ಯಾರ್ಥಿಗಳಿಗೆಯೇ ಹಂಚುತ್ತಿದ್ದರು. ಇದು ಸಹಪಾಠಿ ಗಳಿಗೆ ಕಿತಾಬ್ ಖರೀದಿಸಲು ಮತ್ತು ಇತರ ಅಗತ್ಯಕ್ಕೆ ಉಪಯೋಗವಾಗುತ್ತಿತ್ತು ಹಾಗೂ ವಿದ್ಯಾರ್ಥಿಗಳ ಆರ್ಥಿಕತೆಗೆ ಸಹಾಯವಾಗುತ್ತಿತ್ತು. ಕಡು ಬಡತನ ದಿಂದ ಬಂದ ಅನೇಕ ವಿದ್ಯಾರ್ಥಿಗಳಿದ್ದರು.ಅವರಿಗೆ ವಿಶೇಷಾಂಕವು ನೆರಳು ನೀಡುವ ಮರವಾಗಿತ್ತು.
ಸುನ್ನೀ ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ವಾದ ಕೊಡುಗೆ ನೀಡಿರುವ ನಈಮಿಯವರಿಂದ ಇನ್ನಷ್ಟು ಉಪಯುಕ್ತ ವಾದ ಕೃತಿಗಳು ಬೆಳಕು ಚೆಲ್ಲಲಿ. ಪೈಗಂಬರ್ ﷺ ಕುರಿತ ಅಧಿಕ ಗ್ರಂಥಗಳು ಹೊರಬರಲಿ. ಅಲ್ಲಾಹನು ಅವರ ಬರಹ ಶಕ್ತಿಯನ್ನು ವೃದ್ಧಿಸಲಿ.


