janadhvani

Kannada Online News Paper

ಸೌದಿ: ನಿರಾಳವಾಗಿ ಔಷಧಗಳನ್ನು ಕೊಂಡೊಯ್ಯಲು ಅವಕಾಶ- ಪೂರ್ವಾನುಮತಿ ವ್ಯವಸ್ಥೆ ಜಾರಿ

ಅಜ್ಞಾನ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಜನರು ತಮ್ಮ ನೆರೆಹೊರೆಯವರಿಗಾಗಿ ಅಥವಾ ರೂಮ್‌ಮೇಟ್‌ಗಾಗಿ ಹೆಚ್ಚಿನ ಪ್ರಮಾಣದ ಔಷಧದೊಂದಿಗೆ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಅನೇಕ ಪ್ರಕರಣಗಳಿವೆ.

ದಮಾಮ್: ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವವರು ನಿಯಂತ್ರಿತ ಔಷಧಗಳನ್ನು ಕೊಂಡೊಯ್ಯಲು ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರವು ಡಿಜಿಟಲ್ ವ್ಯವಸ್ಥೆಯನ್ನು ಸ್ಥಾಪಿಸಿದೆ. ಆನ್‌ಲೈನ್ ಮೂಲಕವೇ ಪೂರ್ವಾನುಮತಿ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಔಷಧ ತರುತ್ತಿರುವವರ ಮಾಹಿತಿ, ಔಷಧದ ಭಾವಚಿತ್ರ ಸೇರಿದಂತೆ ಹೆಸರಿನ ಮಾಹಿತಿ, ರೋಗದ ಮಾಹಿತಿ ಹಾಗೂ ಅಧಿಕೃತ ವೈದ್ಯರಿಂದ ಪ್ರಮಾಣ ಪತ್ರ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ.

ಅನುಮತಿ ಲಭ್ಯವಾದ ಬಳಿಕ ಔಷಧಿಗಳನ್ನು ಅವುಗಳ ಪೂರ್ವಾನುಮತಿಯ ಪ್ರಿಂಟ್‌ಔಟ್‌ನೊಂದಿಗೆ ಪ್ರಯಾಣದಲ್ಲಿ ಸಾಗಿಸಬಹುದು. ಪ್ರಯಾಣಿಕರು ಇಂತಹ ಔಷಧಿಗಳನ್ನು ತಮಗಾಗಿ ಅಥವಾ ಇತರರಿಗಾಗಿ ಕೊಂಡೊಯ್ಯಬಹುದು. ಔಷಧಿಗಳ ಬಗ್ಗೆ ಎಲ್ಲಾ ಮಾಹಿತಿಯು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಹೊಸ ಕ್ಲಿಯರೆನ್ಸ್ ಪರವಾನಗಿ ವ್ಯವಸ್ಥೆಯನ್ನು ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (SFDA) ಜಾರಿಗೆ ತಂದಿದೆ. ದೇಶಕ್ಕೆ ಯಾವ ಔಷಧಿಗಳನ್ನು ತರಬಹುದು ಎಂಬುದನ್ನೂ ಒಳಗೊಂಡಂತೆ ಅನುಮತಿಸಲಾದ ಔಷಧಗಳ ಎಲ್ಲಾ ಮಾಹಿತಿಯು ನಿಯಂತ್ರಿತ ಡ್ರಗ್ಸ್ ಸಿಸ್ಟಮ್ (https://cds.sfda.gov.sa/) ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದು ದೇಶದಲ್ಲಿ ಅನುಮೋದಿಸಲಾದ ಮಾದಕವಸ್ತು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳನ್ನು ಒಳಗೊಂಡಿರುವ ಔಷಧಿಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಗತ್ಯ ದಾಖಲೆಗಳು:

  • ಪ್ರಯಾಣಿಕರು CDS ನಲ್ಲಿ ಖಾತೆಯನ್ನು ರಚಿಸಿದ ನಂತರ ಅರ್ಜಿ ಸಲ್ಲಿಸಬಹುದು.
  • ಖಾತೆಯ ಮೂಲಕ ಲಾಗ್ ಇನ್ ಮಾಡಿ, ಕ್ಲಿಯರೆನ್ಸ್ ಸರ್ಟಿಫಿಕೇಟ್ ನ್ನು ಆಯ್ಕೆ ಮಾಡಬೇಕು, ಅರ್ಜಿದಾರನು ಔಷಧಿಯು ತನ್ನ ಸ್ವಂತ ಬಳಕೆಗಾಗಿ ಅಥವಾ ತನ್ನೊಂದಿಗೆ ಪ್ರಯಾಣಿಸುವ ವ್ಯಕ್ತಿಗೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.
  • ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಟಿಕೆಟ್ ಸೇರಿದಂತೆ ಪ್ರಯಾಣದ ಮಾಹಿತಿಯನ್ನು ನಿಖರವಾಗಿ ಒದಗಿಸಬೇಕು.
  • ಔಷಧಿಗಳ ಚಿತ್ರ, ಪ್ರಯಾಣಿಕರ ಅಥವಾ ರೋಗಿಯ ಐಡಿ, ರೋಗಿಯ ವಿವರಗಳು, ವೈದ್ಯರ ಪ್ರಿಸ್ಕ್ರಿಪ್ಷನ್ ಮತ್ತು ವೈದ್ಯಕೀಯ ವರದಿಯನ್ನು ಅದರೊಂದಿಗೆ ಅಪ್ಲೋಡ್ ಮಾಡಬೇಕು.
  • ನಿಖರವಾದ ಔಷಧ ಮಾಹಿತಿ, ವಾಣಿಜ್ಯ ಹೆಸರು, ಔಷಧದಲ್ಲಿ ಒಳಗೊಂಡಿರುವ ಪದಾರ್ಥಗಳು, ಔಷಧದ ಪ್ರಮಾಣ, ಪ್ಯಾಕೆಟ್ ಗಾತ್ರ, ಔಷಧದ ಸಾಂದ್ರತೆ ಮತ್ತು ಡೋಸೇಜ್ ಅನ್ನು ಸಹ ಒದಗಿಸಬೇಕು.
  • ಅರ್ಜಿ ಸಲ್ಲಿಸಿದ ನಂತರ ಸ್ಥಿತಿಯನ್ನು ಪರಿಶೀಲಿಸಬಹುದು.ಮಾಹಿತಿಯು ಅಪೂರ್ಣವಾಗಿದ್ದರೆ, ಅದನ್ನು ಸ್ಥಿತಿಯಲ್ಲಿ ತೋರಿಸಲಾಗುತ್ತದೆ. ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದರೆ ಪರವಾನಗಿ ನೀಡಲಾಗುತ್ತದೆ.

ಔಷಧಿಯೊಂದಿಗೆ ಪ್ರಯಾಣಿಸುವ ವೇಳೆ ಉಂಟಾಗುವ ‘ಟೆನ್ಷನ್’ ಗೆ ಇದು ಪರಿಹಾರವಾಗಿದೆ. ಹೆಚ್ಚಿನ ಜನರು ಯಾವ ಮತ್ತು ಎಷ್ಟು ಸೌದಿ ಅನುಮೋದಿತ ಔಷಧಿಗಳನ್ನು ಸಾಗಿಸಬಹುದು ಎಂಬ ಬಗ್ಗೆ ಚಿಂತಿತರಾಗಿರುವ ಕಾರಣ, ನಿಖರವಾದ ಔಷಧ ಮಾಹಿತಿಯನ್ನು ಒದಗಿಸುವ ಮತ್ತು ಪ್ರಯಾಣದ ಮೊದಲು ಕ್ಲಿಯರೆನ್ಸ್ ಪರವಾನಗಿಯನ್ನು ಪಡೆಯುವ ಸೌಲಭ್ಯವು ಔಷಧಿಗಳಿಗೆ ಸಂಬಂಧಿಸಿದ ಪ್ರಯಾಣದ ಒತ್ತಡವನ್ನು ನೀಗಿಸುತ್ತದೆ. ಸೌದಿ ಅರೇಬಿಯಾದ ಸಂದರ್ಶಕರು ಮತ್ತು ನಿವಾಸಿಗಳಿಗೆ ಹೊಸ ವ್ಯವಸ್ಥೆಯು ಪ್ರಯೋಜನಕಾರಿ ಮತ್ತು ಆರಾಮದಾಯಕವಾಗಿದೆ.

ಹೆಚ್ಚಿನ ವಲಸಿಗರು ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದ್ರೋಗದಂತಹ ಜೀವನಶೈಲಿಯ ಕಾಯಿಲೆಗಳಿಗೆ ವಿವಿಧ ಔಷಧಿಗಳನ್ನು ಬಳಸುತ್ತಾರೆ. ಹೆಚ್ಚಿನ ಸಂಖ್ಯೆಯ ಜನರು ರಜೆಗಾಗಿ ಮನೆಗೆ ಬಂದು ಚಿಕಿತ್ಸೆ ಪಡೆಯುತ್ತಾರೆ ಮತ್ತು ಮುಂದಿನ ಆರು ತಿಂಗಳವರೆಗೆ ಅಥವಾ ಮುಂದಿನ ರಜೆಯವರೆಗೂ ಹೆಚ್ಚಿನ ಪ್ರಮಾಣದ ಔಷಧಿಗಳೊಂದಿಗೆ ಸೌದಿ ಅರೇಬಿಯಾಕ್ಕೆ ಹಿಂತಿರುಗುತ್ತಾರೆ.

ದೇಶದ ಆಸ್ಪತ್ರೆ ಮತ್ತು ವೈದ್ಯರಿಂದ ಪ್ರಿಸ್ಕ್ರಿಪ್ಷನ್, ಬಿಲ್ ಮತ್ತು ಪ್ರಮಾಣಪತ್ರವನ್ನು ಒಳಗೊಂಡಾಗಿದೆ ಯಾತ್ರೆ. ಆದಾಗ್ಯೂ, ಅನುಮತಿಸಲಾದ ಮೊತ್ತಕ್ಕಿಂತ ಹೆಚ್ಚಿನ ಔಷಧವನ್ನು ಹೊಂದಿರುವುದು ಅಪರಾಧವಾಗಿದೆ. ಅಜ್ಞಾನ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಜನರು ತಮ್ಮ ನೆರೆಹೊರೆಯವರಿಗಾಗಿ ಅಥವಾ ರೂಮ್‌ಮೇಟ್‌ಗಾಗಿ ಹೆಚ್ಚಿನ ಪ್ರಮಾಣದ ಔಷಧದೊಂದಿಗೆ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಅನೇಕ ಪ್ರಕರಣಗಳಿವೆ. ಜೈಲು ಶಿಕ್ಷೆ ಅನುಭವಿಸಿದವರೂ ಕಡಿಮೆಯೇನಲ್ಲ.ಸೌದಿಯಲ್ಲಿ ಅನಧಿಕೃತ ಔಷಧ ತಂದು ಬಹಳ ಮಂದಿ ಜೈಲು ಪಾಲಾಗಿರುವ ಪ್ರಕರಣವೂ ಇದೆ.

ಇಂತಹ ಸಂದರ್ಭಗಳನ್ನು ತಪ್ಪಿಸಲು ಹೊಸ ಆನ್‌ಲೈನ್ ಪರ್ಮಿಟ್ ವ್ಯವಸ್ಥೆಯು ವಲಸಿಗರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಔಷಧಿಗಳೊಂದಿಗೆ ಸೌದಿ ಅರೇಬಿಯಾಕ್ಕೆ ಬರುವವರು ಪ್ರಯಾಣದ ಮೊದಲು CDS ಮೂಲಕ ಕ್ಲಿಯರೆನ್ಸ್ ಪರವಾನಗಿಯನ್ನು ಪಡೆಯಲು ಮರೆಯಬಾರದು.