janadhvani

Kannada Online News Paper

ಕುಂಬ್ರ ಮರ್ಕಝ್‌; ಇಪ್ಪತ್ತೈದು ವರ್ಷ ದಾಟಿದಾಗ……

ಸಾವಿರಾರು ಹೆಣ್ಣು ಮಕ್ಕಳ ಬಾಳಿಗೆ ಶಿಕ್ಷಣ ಎಂಬ ಹೊಳಪನ್ನು ನೀಡಿದ ಕುಂಬ್ರ ಮರ್ಕಝ್ ಕೇರಳ ಕರ್ನಾಟಕದಲ್ಲಿ ಮೊದಲ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ

ಅದೊಂದು ಕಾಲವಿತ್ತು. ಹೆಣ್ಣು ಮಕ್ಕಳನ್ನು ಶಿಕ್ಷಣಕ್ಕಾಗಿ ದೂರ ಕಳುಹಿಸಲು ಭಯ ಪಡುವ ಕಾಲ. ಸುರಕ್ಷತೆಯ ದೃಷ್ಟಿ ಮತ್ತು ದಾರಿ ತಪ್ಪುವಳೆಂಬ ದಿಗಿಲು.ಹೆಣ್ಣು ಮಕ್ಕಳನ್ನು ಶಿಕ್ಷಣಕ್ಕಾಗಿ ಊರ ಹೊರಗೆ ಕಳುಹಿಸಲು ಮನಸೊಪ್ಪದೆ ಭೀತಿ ಪಡುತ್ತಿದ್ದ ಮುಸ್ಲಿಂ ಸಮುದಾಯವು ಹತ್ತಿರದಲ್ಲೇ ಇರುವ ಪ್ರಾಥಮಿಕ ಶಿಕ್ಷಣ ಕಲಿತರೆ ಅದುವೆ ಧಾರಾಳ ಸಾಕೆಂಬ ಮನೋಭಾವ ಬೆಳೆಸಿಕೊಂಡಿತ್ತು.

ವಾಹನ ಸೌಕರ್ಯದ ಕೊರತೆ, ಹೋಗಿ ಬರಲು ಕಾಲ್ನಡಿಗೆಯೇ ಆಸರೆ ಮುಂತಾದ ಸಬೂಬುಗಳು ಹೆದರಿಕೆಗೆ ಕಾರಣವಾಗಿತ್ತು.ಅದರ ಜೊತೆಗೆ ಹೆಣ್ಣು ಕಲಿತು ಸಂಸಾರ ಉದ್ದಾರವಾಗ ಬೇಕಿಲ್ಲ ಎಂಬ ಮನೋಭಾವವೂ ಮಹಿಳೆಯರನ್ನು ಶಿಕ್ಷಣದಿಂದ ದೂರ ಮಾಡಿತ್ತು. ಬಹುತೇಕ ಕುಟುಂಬಗಳು ಧಾರ್ಮಿಕ ಸಂಪ್ರದಾಯದಿಂದ ಬೆಳೆದು ಬಂದವುಗಳು. ಶಿಕ್ಷಣ ಕಲಿತ ಹೆಣ್ಣಿನ ಕಾರಣ ಸಂಪ್ರದಾಯಕ್ಕೆ ಹೊಡೆತ ಬೀಳ ಬಹುದೇ? ಎಂಬ ಅಂಜಿಕೆಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಡೆಯಾಗಿತ್ತು. ಹೀಗೆ ಹತ್ತಾರು ಕಾರಣಗಳ ನಡುವೆಯೂ ಎಲ್ಲಿಯಾದರೂ ಅಪರೂಪಕ್ಕೆ ಉನ್ನತ ಶಿಕ್ಷಣ ಪಡೆದ ಹೆಣ್ಣು ಮಕ್ಕಳನ್ನು ಕಾಣಲು ಸಾಧ್ಯವಿತ್ತು. ಶಾಲಾ ಶಿಕ್ಷಣ ಮಾತ್ರವಲ್ಲ; ಧಾರ್ಮಿಕ ಶಿಕ್ಷಣದಿಂದಲೂ ಮಹಿಳೆಯರು ವಂಚಿತರಾಗುತ್ತಿದ್ದರು.ಶಾಲಾ ಶಿಕ್ಷಣದಂತೆ ಮದ್ರಸ ಕೂಡ ಪ್ರಾಥಮಿಕ ಶಿಕ್ಷಣದೊಂದಿಗೆ ಅವರ ಕಲಿಕೆಯ ಬದುಕು ಕೊನೆಗೊಳ್ಳುತ್ತಿತ್ತು.

ಮುಸ್ಲಿಂ ಹೆಣ್ಣು ಮಕ್ಕಳು ಕಲಿಯಬೇಕು,ಅವರ ಮೂಲಕ ಮುಸ್ಲಿಂ ಸಮಾಜ ಶೈಕ್ಷಣಿಕವಾಗಿ ಮುಂದುವರಿಯಬೇಕು ಅದರ ಜೊತೆಗೆ ಸಂಪ್ರದಾಯಗಳಿಗೂ,ಧಾರ್ಮಿಕ ಚೌಕಟ್ಟಿಗೂ ಯಾವುದೇ ತೊಡಕು ಉಂಟಾಗಬಾರದು ಎಂದು ಉಲಮಾಗಳು,ಉಮಾರಾಗಳು ಚಿಂತಿಸಿದ್ದರು. ಅವರ ಕನಸಿನ ಸಾಕಾರವೇ ಕುಂಬ್ರ ಮರ್ಕಝ್.

ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತ ಕುಂಬ್ರ ಮರ್ಕಝ್ ಸಾವಿರಾರು ಹೆಣ್ಣು ಮಕ್ಕಳ ಬದುಕಿಗೆ ಶಿಕ್ಷಣ ಎಂಬ ಬೆಳಕನ್ನು ನೀಡಿದೆ. ಪ್ರತಿ ಮನೆ ಮನೆಯಲ್ಲಿಯೂ ಮಾಹಿರಾ ಪದವಿ ಪಡೆದ ಹೆಣ್ಣು ಮಕ್ಕಳು ಸೃಷ್ಟಿಯಾಗಿದ್ದಾರೆ. ಮಾಹಿರಾಗಳ ಕಾರಣದಿಂದ ಹಲವಾರು ಮನೆಗಳಲ್ಲಿ ಧಾರ್ಮಿಕ ಪ್ರೌಢಿಮೆ ಚಿಗುರಿಕೊಂಡಿದೆ. ಕುಂಬ್ರ ಮರ್ಕಝ್ ನಿಂದ ಕಲಿತ ಹೆಣ್ಣು ಮಕ್ಕಳು ಸಮುದಾಯದ ನಡುವೆ ಇಳಿದಾಗ ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕ ಜಾಗೃತಿಯ ಕಂದೀಲು ಹೊತ್ತಿಕೊಂಡಿತು. ಕುಂಬ್ರ ಮರ್ಕಝ್ ಮಾದರಿಯಾಗಿಸಿ ಹಲವಾರು ಧಾರ್ಮಿಕ ಲೌಕಿಕ ಸಮನ್ವಯ ಮಹಿಳಾ ಕಾಲೇಜು ಗಳು ತಲೆಯೆತ್ತಿ ನಿಂತವು. ಶಿಕ್ಷಣ ಕ್ರಾಂತಿಯು ಮುಸ್ಲಿಂ ಸಮುದಾಯದ ನಡುವೆ ಬಿರುಗಾಳಿಯಂತೆ ಬೀಸಿದಾಗ ಶೈಕ್ಷಣಿಕವಾಗಿ ಹಿಂದುಳಿದ ಸಮಾಜ ಎಂಬ ಹಣೆಪಟ್ಟಿ ಕಳಚಿ ಬಿತ್ತು. ಮುಸ್ಲಿಂ ಸಮುದಾಯದ ನಡುವೆ ಮಹಿಳಾ ಶಿಕ್ಷಣ ಕ್ರಾಂತಿ ಮೊಳಗಿತು.

ಇಪ್ಪತ್ತೈದು ವರ್ಷಗಳ ಹಿಂದಿನ ಕಾಲವನ್ನು ಆಧುನಿಕ ಕಾಲಕ್ಕೆ ಹೋಲಿಕೆ ಮಾಡಿದರೆ ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಇಂದು ತುಂಬಾ ಮುಂದುವರಿದಿದೆ. ಅದಕ್ಕೆ ಕಾರಣ ಮಹಿಳಾ ಶಿಕ್ಷಣದ ತಿರುವು. ಮಹಿಳೆಯರು ಸುಶಿಕ್ಷಿತರಾದಾಗ ಮನೆಯ ಗಂಡು ಮಕ್ಕಳು ಅನಿವಾರ್ಯವಾಗಿ ಶಿಕ್ಷಣದ ಕೊಟ್ಟಿಗೆಗೆ ಕಟ್ಟಿಗೆ ಯಾದರು.ಆ ಮೂಲಕ ಹೆಣ್ಣಿನಂತೆ ಗಂಡು ಮಕ್ಕಳು ಕೂಡ ಶಿಕ್ಷಣ ಪಡೆಯ ತೊಡಗಿದರು. ಇಂತಹ ಒಂದು ಅಭೂತಪೂರ್ವ ಹೆಜ್ಜೆಯತ್ತ ಮುಸ್ಲಿಂ ಸಮುದಾಯದ ದಾಪುಗಾಲಿಟ್ಟಿದ್ದರೆ ಅದಕ್ಕೆ ಉತ್ತೇಜನಾ ಶಕ್ತಿ ತುಂಬಿದ್ದು ಕುಂಬ್ರ ಮರ್ಕಝ್ ಎಂಬುದು ನಿರಾಕರಿಸಲಾಗದ ಸತ್ಯ. ಮಹಿಳಾ ಶಿಕ್ಷಣ ರಂಗದಲ್ಲಿ ಕುಂಬ್ರ ಮರ್ಕಝ್ ಇಟ್ಟ ಹೆಜ್ಜೆ ಇಂದು ರಾಜ್ಯಾದ್ಯಂತ ವ್ಯಾಪಿಸಿದೆ. ಹಲವಾರು ಶಿಕ್ಷಣ ಸಂಸ್ಥೆಗಳು ಜನಿತವಾಗಿದೆ. ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಪದವಿ ಪಡೆದ ಯುವತಿಯರು, ಡಿಗ್ರಿ ಕಲಿತ ಯುವಕರು ಮುಸ್ಲಿಂ ಸಮುದಾಯದಲ್ಲಿ ಬೆಳೆದು ಬರುತ್ತಿದ್ದಾರೆ. ಮುಸ್ಲಿಂ ಸಮುದಾಯ ಬದಲಾಗಿದೆ. ಶಿಕ್ಷಣ ಜೀವನದ ಅನಿವಾರ್ಯ ಎಂಬ ಕಲ್ಪನೆ ಮುಸ್ಲಿಂ ಸಮಾಜದಲ್ಲಿ ಬೇರೂರಿ ಬಿಟ್ಟಿದೆ. ಶೈಕ್ಷಣಿಕವಾಗಿ ಮುಸ್ಲಿಂ ಸಮುದಾಯದೊಳಗೆ ಬದಲಾವಣೆಯ ಪರ್ವ ಆರಂಭಕ್ಕೆ ಅಡಿಪಾಯ ಹಾಕಿ ಕೊಟ್ಟದ್ದು ಕುಂಬ್ರ ಮರ್ಕಝ್.

ಕುಂಬ್ರಾ ಮರ್ಕಝ್ ನಲ್ಲಿ ಮೂರು ವರ್ಷದ ಅಲ್ ಮಾಹಿರಾ ಪದವಿ ಹಾಗೂ ಒಂದು ವರ್ಷದ ಅಲ್ ಖಾನಿತಾ ಕೋರ್ಸ್, ಪಡೆಯುವ ಅವಕಾಶ ದೊಂದಿಗೆ ಪ್ಯಾರ ಮೆಡಿಕಲ್ ವಿಭಾಗ, ಪದವಿಪೂರ್ವ ವಿಭಾಗದಲ್ಲಿ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಹಾಗೂ ಬಿಎ.ಬಿಕಾಮ್ ಕಲಿಯಲು ಅವಕಾಶ ವಿದೆ. ಧಾರ್ಮಿಕತೆಯಲ್ಲಿ ಖುರ್‌ಆನ್ ತಫ್ಸೀರ್, ಹದೀಸ್ ವ್ಯಾಖ್ಯಾನ, ತಸವುಫ್ಸ್ ಸಹಿತ ಇತರ ಅರಬಿ ಗ್ರಂಥ ಗಳನ್ನು ಕಲಿಸಲಾಗುತ್ತದೆ. ಅದರ ಜೊತೆಗೆ ಸುಸಜ್ಜಿತ ವಾದ ಲ್ಯಾಬ್ ವ್ಯವಸ್ಥೆಯೂ ಕಾಣಬಹುದು. ರಾಜ್ಯ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿನಿಯರು ಇಲ್ಲಿ‌ ಕಲಿಯುತ್ತಾರೆ. ವಸತಿ ಸೌಕರ್ಯವೂ ಇಲ್ಲಿದೆ. ಕಂಪ್ಯೂಟರ್ ಶಿಕ್ಷಣ ದೊಂದಿಗೆ ಬರಹ ತರಬೇತಿ,ಭಾಷಾ ಕಲಿಕೆಗೂ ಒತ್ತು ನೀಡಲಾಗುತ್ತದೆ.ಮಮುಞಿ ಹಾಜಿ ಎಂಬ ನಿಸ್ವಾರ್ಥ ದಾನಿಯು ನೀಡಿದ ಜಾಗದಲ್ಲಿ ಶೈಖುನಾ ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ಕುಂಬ್ರ ಮರ್ಕಝ್ ತಲೆ ಎತ್ತಿ ನಿಂತು ಇದೀಗ ಇಪ್ಪತ್ತೈದು ಸಂವತ್ಸರವನ್ನು ಪೂರ್ತಿಗೊಳಿಸುತ್ತಿದೆ. ಸಾವಿರಾರು ಹೆಣ್ಣು ಮಕ್ಕಳ ಬಾಳಿಗೆ ಶಿಕ್ಷಣ ಎಂಬ ಹೊಳಪನ್ನು ನೀಡಿದ ಕುಂಬ್ರ ಮರ್ಕಝ್ ಕೇರಳ ಕರ್ನಾಟಕದಲ್ಲಿ ಮೊದಲ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸಮನ್ವಯ ಶಿಕ್ಷಣ ನೀಡುವ ಧಾರಾಳ ಮಹಿಳಾ ಕಾಲೇಜುಗಳು ಇಂದು ಕಾಣಬಹುದು.‌ಈ ಎಲ್ಲಾ ಕಾಲೇಜು ಗಳಿಗೆ ಕುಂಬ್ರ ಮರ್ಕಝ್ ಮಾದರಿಯಾಗಿದೆ. ಉನ್ನತ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಹೆಣ್ಣಿನ ಪಾಲಿಗೆ ಕನಸಾಗಿದ್ದ ಕಾಲದಲ್ಲಿ ಮಹಿಳಾ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ, ಆ ಮೂಲಕ ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕ ಮುನ್ನಡೆಗೆ ಕಾರಣ ವಾದ ಕುಂಬ್ರ ಮರ್ಕಝ್ ಮಹಿಳಾ ಶಿಕ್ಷಣ ಸಂಸ್ಥೆಗಳ ತಾಯಿ ಎಂಬ ಗೌರವದೊಂದಿಗೆ ಸಾರ್ಥಕವಾದ ಇಪ್ಪತ್ತೈದು ವರ್ಷಗಳನ್ನು ದಾಟಿ ಮುನ್ನುಗ್ಗುತ್ತಿದೆ.

ಕುಂಬ್ರ ಮರ್ಕಝ್ ಆಲದ ಮರದಂತೆ ಎತ್ತರವಾಗಿ ಬೆಳೆದು ನಿಲ್ಲಲು ಕೆಲವು ವ್ಯಕ್ತಿಗಳ ಅವಿಶ್ರಾಂತ ಪರಿಶ್ರಮವಿದೆ. ಅವರ ಪೈಕಿ ಮುಂಚೂಣಿ ಯಲ್ಲಿರುವವರು ಕರ್ನಾಟಕ ಕಂಡ ಶ್ರೇಷ್ಠ ಭಾಷಣಗಾರ, ಕನ್ನಡ ಭಾಷಣದ ಮೂಲಕ ಜನಮನಗೆದ್ದ, ಭಾಷಣರಂಗದ ಭೀಷ್ಮ ಎಂದೇ ಗುರುತಿಸಲ್ಪಡುವ, ಕನ್ನಡಿಗರ ಮನದಾಳದಲ್ಲಿ ಕನ್ನಡ ಭಾಷಣದ ತಂಪನ್ನು ತುಂಬಿದ, ಖ್ಯಾತ ಲೇಖಕ,ವಾಗ್ಮಿ,ಚಿಂತಕ, ಚತುರ ಸಂಘಟಕ ಡಾಕ್ಟರ್ ಅಬ್ದುಲ್ ರಶೀದ್ ಝೈನಿ ಉಸ್ತಾದರಾಗಿದ್ದಾರೆ.‌ ಉಸ್ತಾದರ ಸಾರಥ್ಯದಲ್ಲಿ ಸಂಸ್ಥೆ ಆರಂಭಿಸಿ ಮುನ್ನಡೆದಾಗ ಸಂಸ್ಥೆಯೂ ಬಹುಬೇಗ ಯಶಸ್ಸಿಯ ಶಿಖರ ಏರಿತು.‌ ಉಸ್ತಾದರ ಜೊತೆಯಾಗಿ ಸ್ಥಾಪಕ ಅಧ್ಯಕ್ಷರಾದ ಮರ್ಹೂಮ್ ಉಸ್ಮಾನ್ ಹಾಜಿ, ಈಗಿನ ಅಧ್ಯಕ್ಷರಾದ ಅರಿಯಡ್ಕ ಅಬ್ದುಲ್‌ ರಹ್‌ಮಾನ್ ಹಾಜಿ, ಬಶೀರ್ ಹಾಜಿ SM, BK ರಶೀದ್ ಸಂಪ್ಯ ಸಹಿತ ಹಲವರು ನೆರಳಾಗಿ ದುಡಿದರು. ಇವರೆಲ್ಲರ ಪ್ರಾಮಾಣಿಕ ಸೇವೆಯ ಕಾರಣ ಕುಂಬ್ರ ಮರ್ಕಝ್ ಇಪ್ಪತ್ತೈದರ ಹೊಸ್ತಿಲಿನಲ್ಲಿದೆ.ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆದು ನಿಲ್ಲಲಿ.